ಮೈಸೂರು: ಮಹಾಮಾರಿ ಕೊರೊನಾ ಪ್ರಪಂಚದ ಎಲ್ಲಾ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದ್ದು, ಪ್ರತಿ ಕ್ಷೇತ್ರದಲ್ಲಿ ಹಲವು ತೊಡಕುಗಳನ್ನು ಉಂಟುಮಾಡಿದೆ. ಅದರಲ್ಲೂ ಭಾರತದಲ್ಲಿ ಕೋವಿಡ್ ಪ್ರಭಾವ ಹೆಚ್ಚಾಗಿದ್ದು, ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆಯೆಂಬುದು ಕೆಲ ಖಾಸಗಿ ಶಿಕ್ಷಣ ಸಂಸ್ಥೆಯವರ ಅಭಿಪ್ರಾಯ.
ಪರೀಕ್ಷಾ ಸಮಯದಲ್ಲಿ ಕೋವಿಡ್ ಉಲ್ಬಣಿಸಿದ್ದು, ಇದರಿಂದ ಪ್ರಾಥಮಿಕ ಶಾಲೆಗಳಲ್ಲಿ ಪರೀಕ್ಷೆ ನಡೆಸದೆ ಮಕ್ಕಳನ್ನು ಪಾಸ್ ಮಾಡಲಾಗಿದೆ. ಪ್ರಮುಖವಾಗಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಆತಂಕದ ನಡುವೆ ಕೋವಿಡ್ ನಿಯಮಗಳೊಂದಿಗೆ ನಡೆಸಲಾಯಿತು. ಆದ್ರೆ ಕೋವಿಡ್ ಪ್ರಭಾವದಿಂದ ಈ ಸಾಲಿನ ಶಾಲೆಗಳು ಆರಂಭವಾಗಿಲ್ಲ, ಶಾಲೆಗಳ ಆರಂಭಕ್ಕೆ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಮೈಸೂರು ಜಿಲ್ಲೆಯಲ್ಲಿ ಎಲ್ಕೆಜಿ ಯಿಂದ ಹಿಡಿದು ಪಿಯುಸಿವರೆಗೂ 850 ರಿಂದ 900 (ಖಾಸಗಿ ಶಿಕ್ಷಣ ಸಂಸ್ಥೆ) ಶಾಲೆಗಳು ಇದ್ದು, ಲಕ್ಷಾಂತರ ವಿದ್ಯಾರ್ಥಿಗಳು ಈ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕೋವಿಡ್ ಪರಿಣಾಮ ಶಾಲೆಗಳು ಆರಂಭವಾಗಿಲ್ಲ. ಇನ್ನೂ ಯಾವಾಗ ಶಾಲೆ ಪ್ರಾರಂಭವಾಗುತ್ತದೆ ಎಂದು ಹೇಳಲು ಬರುತ್ತಿಲ್ಲ. ಇದರ ಮಧ್ಯೆ ಆನ್ಲೈನ್ ಶಿಕ್ಷಣ ಗ್ರಾಮಾಂತರ ಪ್ರದೇಶಗಳಲ್ಲಿ ಅಷ್ಟೊಂದು ಯಶಸ್ಸು ಕಂಡಿಲ್ಲ. ಆನ್ಲೈನ್ನಲ್ಲಿ ಕೆಲವು ವಿಚಾರಗಳನ್ನು ಕಲಿಯಲು ಕಷ್ಟ. ಆದರೂ ಶುಲ್ಕ ವಸೂಲಿ ಮಾಡಲು ಆನ್ಲೈನ್ ಶಿಕ್ಷಣ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಕೋವಿಡ್ ಸಮಯದಲ್ಲೂ ಶುಲ್ಕ ವಸೂಲಾತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಿದ್ದು ಇದೊಂದು ದಂಧೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರಾದ ರವಿ.
ಇನ್ನು ದಳವಾಯಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಎಮ್. ಲಕ್ಷ್ಮಣ್ ಮಾತನಾಡಿ, 1-10ನೇ ತರಗತಿಯ ಮಕ್ಕಳು ಶಾಲೆಗೆ ಹೋಗದೆ ಡಿಪ್ರೆಶನ್ಗೆ ಹೋಗಿದ್ದಾರೆ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ, ಈ ರೀತಿ ಬ್ರೇಕ್ ಆದರೆ ಮಕ್ಕಳನ್ನು ಪುನಃ ಶಾಲಗೆ ಕರೆತರುವುದು ಕಷ್ಟ. ಈ ನಡುವೆ 6 ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ಕೊಟ್ಟಿಲ್ಲ. ಫೀಸ್ ಕೇಳಿದರೆ ಪೋಷಕರು ಕೊಡುತ್ತಿಲ್ಲ. ಇದಕ್ಕೆ ಸರ್ಕಾರ ಒಂದು ಸಾರಿ ಫೀಸ್ ಕಟ್ಟಿ ಎನ್ನುತ್ತದೆ, ಮತ್ತೊಂದು ಬಾರಿ ಶೇ.50 ರಷ್ಟು ಕಟ್ಟಿ ಎನ್ನುತ್ತದೆ. ಈ ಗೊಂದಲದಿಂದ ಖಾಸಗಿ ಶಾಲಾ-ಕಾಲೇಜುಗಳನ್ನು ನಡೆಸುವುದು ಕಷ್ಟವಾಗಿದೆ ಎಂದರು.
ಇನ್ನು ಆನ್ಲೈನ್ ತರಗತಿ ನಡೆಸಲು ಇಂಟರ್ನೆಟ್ ಸಮಸ್ಯೆ ಇದೆ. ಮಕ್ಕಳಲ್ಲೂ ಸಹ ಇದಕ್ಕೆ ಸರಿಯಾದ ಮೊಬೈಲ್, ಕಂಪ್ಯೂಟರ್ ವ್ಯವಸ್ಥೆ ಇಲ್ಲ. ಕೋವಿಡ್ ಹಿನ್ನಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದರ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಸಮಸ್ಯೆಗೆ ಸಿಲುಕಿದ್ದಾರೆ. ಅಲ್ಲದೇ ಆನ್ಲೈನ್ ಶಿಕ್ಷಣ ಅಷ್ಟೊಂದು ಯಶಸ್ವಿಯಾಗಿಲ್ಲ ಎನ್ನುತ್ತಾರೆ ದಳವಾಯಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಮ್. ಲಕ್ಷ್ಮಣ್.