ಮೈಸೂರು: ಬಹುನಿರೀಕ್ಷಿತ ಕೋವಿಡ್ ಲಸಿಕೆ ಮೈಸೂರಿಗೆ ಬಂದಿಳಿದಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಕೋಲ್ಡ್ ಸ್ಟೋರೇಜ್ನಲ್ಲಿ ಲಸಿಕೆ ಭದ್ರವಾಗಿ ಇಡಲಾಗಿದೆ.
ರಾತ್ರಿ 11:30ಕ್ಕೆ ಮೈಸೂರಿಗೆ ಕೊರೊನಾ ವ್ಯಾಕ್ಸಿನ್ ತರಲಾಗಿದ್ದು, ಕೋಲ್ಡ್ ಸ್ಟೋರೇಜ್ನಲ್ಲಿ 47ಸಾವಿರ ಡೋಸೇಜ್ ದಾಸ್ತಾನು ಇಡಲಾಗಿದೆ. 20,500 ಡೋಸೇಜ್ ಮೈಸೂರು ಜಿಲ್ಲೆಗೆ ನಿಗದಿ ಮಾಡಲಾಗಿದೆ. ಉಳಿದ ಡೋಸೆಜ್ ಚಾಮರಾಜನಗರ, ಮಂಡ್ಯ, ಕೊಡಗು, ಹಾಗೂ ಹಾಸನಕ್ಕೆ ಹಂಚಿಕೆ ಮಾಡಲಾಗುತ್ತದೆ. ಮೈಸೂರಿನಿಂದ ಇತರ ಜಿಲ್ಲೆಗಳಿಗೆ ಲಸಿಕೆ ತಲುಪಲಿದೆ. ಲಸಿಕೆ ವಿತರಣೆಗೆ ಜಿಲ್ಲಾಡಳಿತ ಸಜ್ಜುಗೊಂಡಿದೆ.
ಇನ್ನು, ಮಕರ ಸಂಕ್ರಾಂತಿ ಹಬ್ಬದಂದು ಸಾಂಸ್ಕೃತಿಕ ನಗರಿಗೆ ವ್ಯಾಕ್ಸಿನ್ ಬಂದಿದೆ. ಕೊರೊನಾ ವ್ಯಾಕ್ಸಿನ್ಗೆ ಅಯ್ಯಪ್ಪ ಭಕ್ತರು ವಿನೂತನವಾಗಿ ಸ್ವಾಗತ ಕೋರಿದ್ದಾರೆ. "ಕೊರೊನಾ ಆಗಲಿ ಭೂಗತ, ವ್ಯಾಕ್ಸಿನ್ಗೆ ಸಂಕ್ರಾಂತಿಯ ಸ್ವಾಗತ" ಎಂದು ಸ್ವಾಗತ ಕೋರಿದ್ದಾರೆ. ದೂರಾಗಲಿ ಕೊರೊನಾ, ಸಂಕ್ರಾಂತಿ ತರಲಿ ಸುಗ್ಗಿಯೂಟ, ತೊಲಗಲಿ ಕೊರೊನಾ ಭೀತಿ, ಸಂಕ್ರಾಂತಿ ತರಲಿ ಸಂಪ್ರೀತಿ ಎಂದು ಮೈಸೂರಿನ ಜನತಾನಗರದ ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ ವಿವಿಧ ಘೋಷಣೆಗಳನ್ನ ಬರೆಯುವ ಮೂಲಕ ಸಂಕ್ರಾಂತಿ ಆಚರಿಸುತ್ತಿದ್ದಾರೆ .