ಮೈಸೂರು: ನಂಜುಂಡೇಶ್ವರ ದೇವಸ್ಥಾನದ ಪಂಚ ಮಹಾರಥೋತ್ಸವ ಜಾತ್ರೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಕೊರೊನಾ ಎರಡನೇ ಅಲೆ ಜಾತ್ರೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಮಾ. 26ರಂದು ಪಂಚಮಹಾ ರಥೋತ್ಸವಕ್ಕೆ ಒಂದೆಡೆ ವಿಜೃಂಭಣೆಯ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸರಳವಾಗಿ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ದೇವಸ್ಥಾನದ ಆಡಳಿತ ಮಂಡಳಿ ಗೊಂದಲಕ್ಕೆ ಸಿಲುಕಿದೆ.
ದೊಡ್ಡ ಜಾತ್ರೆಗೆ ಕೇವಲ 500 ಮಂದಿ ಭಾಗವಹಿಸಲು ಸರ್ಕಾರದಿಂದ ಆದೇಶವಿರುವುದರಿಂದ ಯಾವ ರೀತಿ ಪಂಚ ಮಹಾರಥೋತ್ಸವ ಜಾತ್ರೆ ಆಚರಿಸಬೇಕು ಎಂಬ ಗೊಂದಲದಲ್ಲಿ ನಂಜನಗೂಡು ತಾಲೂಕು ಆಡಳಿತ ಇದೆ. ದೇವಸ್ಥಾನದ ಆಡಳಿತ ಮಂಡಳಿಯು ಜಿಲ್ಲಾಧಿಕಾರಿಗಳ ಸೂಚನೆಗೆ ಕಾಯುತ್ತಿದೆ.
ಇದನ್ನೂ ಓದಿ: ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ: ಕೋವಿಡ್ ನಿಯಮ ಪಾಲನೆಗೆ ತುಮಕೂರು ಜಿಲ್ಲಾಡಳಿತ ಸೂಚನೆ
ಕಳೆದ ವರ್ಷ ಕೊರೊನಾ ಆರಂಭಗೊಂಡ ಹಿನ್ನೆಲೆ ದೇಶದಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಪಂಚ ಮಹಾರಥೋತ್ಸವ ಜಾತ್ರೆಯನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲಾಯಿತು. ಇದೀಗ ಕೊರೊನಾ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಈ ಬಾರಿಯೂ ಪಂಚ ಮಹಾರಥೋತ್ಸವ ಜಾತ್ರೆ ಸರಳವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.