ಮೈಸೂರು: ಕೊರೊನಾ ಹೊಡೆತಕ್ಕೆ ಪ್ರವಾಸೋದ್ಯಮದ ಜೊತೆ ಜೊತೆಗೆ ಪ್ರವಾಸೋದ್ಯಮ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಲಾಕ್ಡೌನ್ ಸಡಿಲಿಕೆಯಾದರೂ ಸಂಕಷ್ಟದಿಂದ ಹೊರಬರಲಾರದ ಟ್ಯಾಕ್ಸಿ ಮಾಲೀಕರು, ಮಾಡಿದ ಸಾಲ ತೀರಿಸಲಾಗದೇ ತಮ್ಮ ಟ್ಯಾಕ್ಸಿಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ, ವಿಧಿಯಾಟದಿಂದ ಟ್ಯಾಕ್ಸಿಗಳನ್ನು ಕೊಳ್ಳುವವರಿಲ್ಲದೆ ಟ್ರಾವೆಲ್ ಮಾಲೀಕರು ಅಡಕತ್ತಿರಿಯಲ್ಲಿ ಸಿಲುಕಿದ್ದಾರೆ.
ಮಾಡಿದ ಸಾಲವನ್ನು ತೀರಿಸುವ ಶಕ್ತಿಯೂ ಅವರಲ್ಲಿಲ್ಲ, ಟ್ಯಾಕ್ಸಿ ಮಾರಿ ಅದರಿಂದ ಬಂದ ಹಣವನ್ನು ಸಾಲಗಾರರಿಗೆ ಕೊಟ್ಟರಾಯಿತೆಂದರೆ ಅದು ಕೂಡ ಸಾಧ್ಯವಾಗುತ್ತಿಲ್ಲ. ಈ ವಿಷಮ ಪರಿಸ್ಥಿತಿಯಲ್ಲಿದ್ದಾರೆ ಟ್ಯಾಕ್ಸಿ ಮಾಲೀಕರು..!
ಟೂರ್ ಆ್ಯಂಡ್ ಟ್ರಾವೆಲ್ ಏಜೆನ್ಸಿ, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಸೇರಿದಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲಕ್ಷಾಂತರ ಜನರು ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದಾರೆ. ಆದರೆ, ಸುಮಾರು ಐದು ತಿಂಗಳುಗಳಿಂದ ಕೊರೊನಾ ಹೊಡೆತದಿಂದ ಪ್ರವಾಸೋದ್ಯಮ ಇಲಾಖೆ ತತ್ತರಿಸಿದ್ದು ಇದನ್ನೇ ನಂಬಿ ಕುಳಿತಿದ್ದ ಟ್ಯಾಕ್ಸಿ ಮಾಲೀಕರ ಬದುಕು ಇದೀಗ ಸಂಕಷ್ಟಕ್ಕೆ ಸಿಲುಕಿದೆ.
ಖಾಸಗಿ, ಬ್ಯಾಂಕ್ ಫೈನಾನ್ಸ್ ಹಾಗೂ ಇತರೆ ವ್ಯಕ್ತಿಗಳಿಂದ ಸಾಲ ಪಡೆದು ಟ್ಯಾಕ್ಸಿಗಳನ್ನು ಖರೀದಿಸಿದ್ದೇವೆ, ಮಾಡಿದ ಸಾಲ ತೀರಿಸುವ ಸಲುವಾಗಿ ನಮ್ಮ ಟ್ಯಾಕ್ಸಿಗಳನ್ನು ಮಾರಾಟ ಮಾಡಲು ಮುಂದಾಗಿದ್ದೇವೆ. ಆದರೆ, ಟ್ಯಾಕ್ಸಿಗಳನ್ನು ಕೊಳ್ಳುವವರು ಇಲ್ಲಿ ಯಾರೂ ಬರುತ್ತಿಲ್ಲ. ಸರ್ಕಾರದಿಂದ ಯಾವುದೇ ಧನ ಸಹಾಯ ಸಿಗುತ್ತಿಲ್ಲ, ಸಂಸಾರದ ಹೊರೆಯಿಂದ ನಾಮ್ಮ ಬದುಕು ಬೀದಿಗೆ ಬಂದಿದೆ. ಜೀವನ ನಡೆಸುವದೂ ಕಷ್ಟವಾಗುತ್ತಿದೆ.
ಪ್ರವಾಸೋದ್ಯಮ ಚೇತರಿಸಿಕೊಳ್ಳಲು ಇನ್ನು 6-7 ತಿಂಗಳುಬೇಕು, ಲೋನ್ಗಾಗಿ ಫೈನಾನ್ಸರ್ಸ್ ತೊಂದರೆ ಕೊಡುತ್ತಿದ್ದಾರೆ. ಲೋನ್ ಕಟ್ಟದಿದ್ದರೆ ವಾಹನ ಸೀಜ್ ಮಾಡುತ್ತಾರೆ. ಡಿಸೇಲ್ ದರ, ಇನ್ಸೂರೆನ್ಸ್, ಸಂಚಾರಿ ಪೊಲೀಸರ ಕಾಟ ಸೇರಿದಂತೆ ಹತ್ತಾರು ಸಮಸ್ಯೆಗಳು ಕಾಡಲಾಂಬಿಸಿವೆ. ಕೊರೊನಾ ಭಯದಿಂದ ಜನರು ಸಹ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಇವುಗಳಿಂದ ಜೀವನ ನಿರ್ವಹಣೆಯೆ ಕಷ್ಟವಾಗಿದೆ ಎನ್ನುತ್ತಾರೆ ಟ್ಯಾಕ್ಸಿ ಮಾಲೀಕ ಅಲ್ತಾಫ್.