ಮೈಸೂರು : ಸಿರಿಧಾನ್ಯಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದರಿಂದ ಮಾನವನ ಆರೋಗ್ಯ ವೃದ್ದಿಯಾಗುತ್ತದೆ. ಬಿಪಿ, ಸಕ್ಕರೆ ಕಾಯಿಲೆ ಮುಂತಾದ ಸಮಸ್ಯೆಗಳು ಸಿರಿಧಾನ್ಯಗಳ ಬಳಕೆಯಿಂದ ನಿವಾರಣೆಯಾಗುತ್ತವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು. ಬುಧವಾರ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಏರ್ಪಡಿಸಿದ್ದ ಸಿರಿಧಾನ್ಯಗಳ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿಧಾನ್ಯಗಳು ಒಂದು ಕಾಲದಲ್ಲಿ ಬಡವರ ಆಹಾರವಾಗಿತ್ತು. ಆದರೆ ಇಂದು ಶ್ರೀಮಂತರ ಆಹಾರವಾಗಿದೆ. ಹಾಗಾಗಿ ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹೊರ ದೇಶಗಳಲ್ಲಿಯೂ ಸಿರಿ ಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದರು.
ಬೆಂಗಳೂರಿನಲ್ಲಿ ಸಿರಿಧಾನ್ಯ ಮೇಳ: ವಿಶ್ವಸಂಸ್ಥೆಯಲ್ಲಿ 77 ದೇಶಗಳು ಒಪ್ಪಿಗೆ ನೀಡಿ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಗಿದೆ. ಜನವರಿ 20, 21 ಮತ್ತು 23 ರಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ಮೇಳವನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಗಳಲ್ಲಿ ಸಿರಿಧಾನ್ಯಗಳ ಮೇಳ ನಡೆಯುತ್ತಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಕೃಷಿ ಲಾಭದಾಯಕವಾದ ಉದ್ಯೋಗವಾಗಿದ್ದು ಖುಷಿಯಿಂದ ಮಾಡಬೇಕು. ಲಾಭದಾಯಕ ಎಂಬುದನ್ನು ಮನವರಿಕೆ ಮಾಡಲು ಪ್ರಗತಿಪರ ರೈತರನ್ನು ಕರೆಸಿ ಅವರಿಂದ ಮಾಹಿತಿಯನ್ನು ಕೊಡಿಸಲಾಗುತ್ತಿದೆ. ವ್ಯವಸ್ಥಿತವಾಗಿ ಕೃಷಿ ಮಾಡಿದರೆ ಲಾಭ ಗಳಿಸಬಹುದು ಎಂದು ಸಚಿವರು ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ 38 ಕೋಟಿ ಜನಸಂಖ್ಯೆ ಇತ್ತು. 1968ರಲ್ಲಿ ಹಸಿರು ಕ್ರಾಂತಿ ಆಗುವವರೆಗೆ ಆಹಾರ ಕೊರತೆ ಇತ್ತು. ಇಂದು 138 ಕೋಟಿ ಜನಸಂಖ್ಯೆ ಇದ್ದರೂ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ ಎಂದರು.
ಸಿರಿ ಧಾನ್ಯಗಳ ಮಾಹಿತಿ ಒಳಗೊಂಡ ಕೈಪಿಡಿಯನ್ನು ಬಿ.ಸಿ ಪಾಟೀಲ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಉಪ ಮಹಾಪೌರ ರೂಪ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಇದ್ದರು.
ಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡಿ: ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆಗೆ ಮೈಸೂರು ನಗರದ ಮೇಯರ್ ಶಿವಕುಮಾರ್ ಚಾಲನೆ ನೀಡಿದರು. ಸಕ್ರಿಯ ಭಾರತ ನಿರ್ಮಾಣಕ್ಕೆ ಈ ರೀತಿಯ ಕಾರ್ಯಕ್ರಮಗಳು ಪೂರಕ. ಉತ್ತಮ ಆರೋಗ್ಯಕ್ಕೆ ಯೋಗದ ಜೊತೆ ಪೌಷ್ಟಿಕಾಂಶವುಳ್ಳ ಆಹಾರ ಪದ್ಧತಿ ಮುಖ್ಯ. ಆದ್ದರಿಂದ ಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡಬೇಕಿದೆ ಎಂದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪೂರ್ಣಿಮಾ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವತಿಯಿಂದ ಸಿರಿಧಾನ್ಯಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಸಿರಿಧಾನ್ಯಗಳ ನಡಿಗೆ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. 50 ವರ್ಷಗಳ ಹಿಂದೆ ಸಿರಿಧಾನ್ಯಗಳೇ ಮುಖ್ಯ ಆಹಾರವಾಗಿತ್ತು. ಹೆಚ್ಚು ಸಿರಿಧಾನ್ಯಗಳನ್ನು ಬಳಸುವುದರಿಂದ ಆರೋಗ್ಯವಾಗಿರಬಹುದು ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರ ರೂಪ ಮಾತನಾಡಿ, ಇತ್ತೀಚಿಗೆ ಬದಲಾಗುತ್ತಿರುವ ಜೀವನ ಶೈಲಿಯಿಂದ ಹಲವಾರು ಖಾಯಿಲೆಗಳು ಬರುವ ಸಾಧ್ಯತೆಗಳಿವೆ. ಆದ್ದರಿಂದ ನಮ್ಮ ಜೀವನ ಶೈಲಿಯಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಬೇಕು. ಮುಖ್ಯವಾಗಿ ಜನರಲ್ಲಿ ಹೆಚ್ಚಾಗಿ ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸಬೇಕೆಂದರು.
ಸಿರಿಧಾನ್ಯ ನಡಿಗೆಯು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಪ್ರಾರಂಭವಾಗಿ ದೇವರಾಜ ಅರಸು ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಅವರಣದಲ್ಲಿ ಸಂಪೂರ್ಣವಾಯಿತು. ನಡಿಗೆಯ ವೇಳೆ ಸಿರಿಧಾನ್ಯಗಳ ಮಹತ್ವ ಸಾರುವ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಲಾಯಿತು. ನಡಿಗೆಯಲ್ಲಿ ಕೃಷಿ ಸಂಬoಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೃಷಿ ತಂತ್ರಜ್ಞರ ಸಂಸ್ಥೆಯ ಹಾಗೂ ಕೃಷಿ ಪರಿಕರ ಮಾರಾಟ ಸಂಘದ ಪದಾಧಿಕಾರಿಗಳು, ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಇದ್ದರು.
ಇದನ್ನೂ ಓದಿ: ಸಿರಿಧಾನ್ಯಗಳ ಉತ್ಪಾದನೆ ಮತ್ತು ಸೇವನೆಯಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿ