ಮೈಸೂರು: ಏಷ್ಯಾದಲ್ಲಿಯೇ ನಂಬರ್ ಒನ್ ಎಂದು ಖ್ಯಾತಿ ಗಳಿಸಿರುವ ಮೈಸೂರಿನ ಮೃಗಾಲಯಕ್ಕೆ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ.
ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯಕ್ಕೆ ದಿನದಿಂದ ದಿನಕ್ಕೆ ಪ್ರವಾಸಿಗರ ದಟ್ಟಣೆ ಹೆಚ್ಚಳವಾಗುತ್ತಿರುವುದರಿಂದ ಈ ನಿರ್ಧಾರ ಮಾಡಲಾಗಿದೆ. ಮೃಗಾಲಯ ಪ್ರವೇಶ ದ್ವಾರದ ಮುಂದೆ ವಿಶಾಲವಾದ ಪಾರ್ಕಿಂಗ್ ಸ್ಥಳವಿದ್ದು, ಯಾರೇ ಪ್ರವಾಸಿಗರು ಬಂದರೂ ಇಲ್ಲಿ ವಾಹನಗಳನ್ನು ನಿಲ್ಲಿಸಿ ಪ್ರವೇಶ ದ್ವಾರದ ಮುಂದಿರುವ ರಸ್ತೆ ದಾಟಿ ಮೃಗಾಲಯಕ್ಕೆ ಹೋಗಬೇಕಿತ್ತು. ಈ ರಸ್ತೆಯಲ್ಲಿ ಮೈಸೂರಿನಿಂದ ನಂಜನಗೂಡು, ಗುಂಡ್ಲುಪೇಟೆ, ತಮಿಳುನಾಡು, ಊಟಿ, ಕೇರಳ, ಚಾಮರಾಜನಗರಕ್ಕೆ ಹೋಗುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.
ವಾಹನಗಳ ದಟ್ಟಣೆ ಮಧ್ಯೆ ರಸ್ತೆ ದಾಟಲು ಪ್ರವಾಸಿಗರು ಕಷ್ಟ ಪಡುತ್ತಿದ್ದರಿಂದ ಮೃಗಾಲಯದ ಮುಂಭಾಗದಲ್ಲಿ 1.75 ಕೋಟಿ ರೂ.ವೆಚ್ಚದಲ್ಲಿ 4X13 ಅಳತೆಯ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.