ಮೈಸೂರು: ಅಗ್ನಿಪಥ ಗಲಾಟೆ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಪರೋಕ್ಷವಾಗಿ ಅಲ್ಲ, ಪ್ರತ್ಯಕ್ಷವಾಗಿಯೇ ಕೈವಾಡ ಇದೆ. ಇದನ್ನ ನೇರವಾಗಿ ಹೇಳುತ್ತೇನೆ. ಅಗ್ನಿಪಥ ಒಂದು ಒಳ್ಳೆಯ ಯೋಜನೆ. ಯುವ ಜನಾಂಗ ಮೋದಿಗೆ ಅಭಿನಂದನೆ ಸಲ್ಲಿಸಬೇಕು. ಕರ್ನಾಟಕ ರಾಜ್ಯದ ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ ಬೇರೆ ಬೇರೆ ಸೆಕ್ಯೂರಿಟಿ ಎಜೆನ್ಸಿಗಳಲ್ಲಿ ಅವರಿಗೆ ಉದ್ಯೋಗ ಕೊಡುವ ಬಗ್ಗೆ ಸರ್ಕಾರ ಯೋಚನೆ ಮಾಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶ ಭಕ್ತರು ದೇಶ ಕಾಯಲು ಹೋಗುತ್ತಾರೆ. ದೇಶದ ಆಸ್ತಿಗೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ನಮ್ಮ ಯುವಕರನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ. ದಯವಿಟ್ಟು ಯುವಕರು ದಾರಿ ತಪ್ಪಬಾರದು. ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಗೃಹ ಸಚಿವರು ಹೇಳಿದರು.
ಬೆಳಗಾವಿಯ ಗೌಂಡವಾಡದಲ್ಲಿ ಸಂಭವಿಸಿದ ಗುಂಪು ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ವಿಚಾರವಾಗಿ ಮಾತನಾಡಿ, ಅದು ವೈಯುಕ್ತಿಕ ವಿಚಾರಕ್ಕೆ ನಡೆದಿರುವ ಘಟನೆಯಾಗಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಗಲಾಟೆ ನಡೆಯುತಿತ್ತು. ಅದು ಈಗ ವಿಕೋಪಕ್ಕೆ ತಿರುಗಿದೆ. ಅಲ್ಲೀಗ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಸಂಬಂಧ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ, ಬದಲಾವಣೆಗೆ ಮುಕ್ತವಾಗಿದ್ದೇವೆ: ಸಿಎಂ
ಪ್ರಧಾನಿ ಮೋದಿ ಅವರು ಯೋಗ ದಿನಾಚರಣೆಗೆ ಮೈಸೂರಿಗೆ ಬರುತ್ತಿರುವ ಹಿನ್ನೆಲೆ ಭದ್ರತಾ ವ್ಯವಸ್ಥೆಯನ್ನ ವೀಕ್ಷಣೆ ಮಾಡಿದ್ದೇನೆ. ಮೈಸೂರಿನಲ್ಲಿ ಮೋದಿ ಯೋಗ ಮಾಡುತ್ತಿರುವುದು ನಮ್ಮ ಹೆಮ್ಮೆ. ಗೃಹ ಇಲಾಖೆ ಎಲ್ಲ ಏರ್ಪಾಡುಗಳನ್ನ ಮಾಡಿದೆ. ಪ್ರಧಾನಮಂತ್ರಿಗೆ ಸಾಕಷ್ಟು ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಎಲ್ಲಾ ಸಿದ್ಧತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.