ಮೈಸೂರು : ನಾನು ಚಾಮುಂಡಿ ತಾಯಿಯ ದೇವಸ್ಥಾನದ ಆವರಣದಲ್ಲಿ ಹೇಳುತ್ತಿದ್ದೇನೆ, ನನ್ನನ್ನು ಸಿದ್ದರಾಮಯ್ಯನವರೇ ಕರೆದು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು. ಅದರೀಗ ಮಾತು ತಪ್ಪಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದು ಶಾಸಕ ಬಿ.ಸಿ.ಪಾಟೀಲ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನದ ಬಳಿಕ ಈ ಟಿವಿ ಭಾರತ್ ಜೊತೆ ಮಾತನಾಡಿದ ಬಿ.ಸಿ.ಪಾಟೀಲ್, ನಾನು 3 ಬಾರಿ ಶಾಸಕನಾಗಿದ್ದೇನೆ. 40 ವರ್ಷಗಳಿಂದ ಹಿರೇಕೆರೂರು ತಾಲ್ಲೂಕಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಹಾಗಾಗಿ ಕೊಡಿ ಎಂದು ಕೇಳಿದ್ದೆ. ಮುಂದೆ ಸಚಿವ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಕೊಡುತ್ತೇವೆ ಎಂದು ಹೇಳಿದ್ದರು.
ನಾನು ಚಾಮುಂಡಿ ತಾಯಿಯ ಆವರಣದಲ್ಲಿ ನಿಂತು ಹೇಳುತ್ತಿದ್ದೇನೆ, ಅಸೆಂಬ್ಲಿ ಚುನಾವಣೆ ನಡೆಯುವ ವೇಳೆ ಸಿದ್ದರಾಮಯ್ಯ ಅವರೇ ಕರೆದು ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದರು. ಮುಂದಿನ ಬಾರಿ ಲೋಕಸಭಾ ಚುನಾವಣೆಯಾದ ಮೇಲೆ ನೀನು ಬೇಡ ಎಂದರೂ ಮಂತ್ರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ನಾನು ಸರಿ ಬಿಡಿ ಎಂದು ಸುಮ್ಮನಾಗಿದ್ದೆ ಎಂದರು.
ಆ ನಂತರ ದಿನೇಶ್ ಗುಂಡೂರಾವ್, ಪರಮೇಶ್ವರ್ ಎಲ್ಲರೂ ಇದೇ ಮಾತನ್ನು ಹೇಳಿದ್ದರು. ಆದರೆ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಟ್ವಿಟರ್ ನೋಡಿದ ಮೇಲೆ ಇಬ್ಬರು ಪಕ್ಷೇತರರಿಗೆ ಮಾತ್ರ ಸಚಿವ ಸ್ಥಾನ ಎಂದು ಹೇಳಿದ್ದಾರೆ. ಇದರಿಂದ ಬೇಸರವಾಗಿ ಮಂತ್ರಿ ಸ್ಥಾನ ಕೊಟ್ಟರೂ ಬೇಡ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಪಾಟೀಲ್ ಹೇಳಿದರು.
ಮುಂದಿನ ರಾಜಕೀಯ ತೀರ್ಮಾನವನ್ನು ನನ್ನ ತಾಲೂಕಿನ ಮತದಾರರನ್ನು ಕರೆದು ತೀರ್ಮಾನ ಮಾಡುತ್ತೇನೆ ಎಂದ ಬಿ.ಸಿ.ಪಾಟೀಲ್ ಕಾಂಗ್ರೆಸ್‌ನ ಇತ್ತೀಚಿನ ನಡವಳಿಕೆ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದು ಆರೋಪಿಸಿದರು.