ಮೈಸೂರು: ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ ಜಿಲ್ಲೆಯ ನೂತನ ಎಂಟು ಶಾಸಕರಿಗೆ ಮೈಸೂರು ಜಿಲ್ಲಾ ಮತ್ತು ನಗರ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಅಭಿನಂದಿಸಲಾಯಿತು.
ಇದಕ್ಕೂ ಮುನ್ನ ನಗರದ ಮೆಟ್ರಿಪಾಲ್ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ಥಳಿಗೆ ಹೂವಿನ ಹಾರ ಹಾಕಿ ಗೌರವ ನಮನ ಸಲ್ಲಿಸಲಾಯಿತು. ಬಳಿಕ ನಗರದ ಚಾಮರಾಜ ವಿಧಾನಸಭಾದ ಕ್ಷೇತ್ರದ ನೂತನ ಶಾಸಕ ಕೆ ಹರೀಶ್ ಗೌಡ ಮಾತನಾಡಿ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 135 ಶಾಸಕರ ಗೆಲುವಿನ ಹಿಂದೆ ಪಕ್ಷದ ಕಾರ್ಯಕರ್ತರ ಕೊಡುಗೆ ಅಪಾರ. ನನಗೆ ಮೊದಲ ಬಾರಿಗೆ ಶಾಸಕಾಂಗ ಸ್ಥಾನ ಅಲಂಕರಿಸಲು ದುಡಿದ ಎಲ್ಲಾ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಐದು ಬಾರಿ ಬಿಜೆಪಿ ಗೆದ್ದಿರುವ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಕೋಟೆ ಮಾಡುವಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಶ್ರಮಿಸಿದ್ದಾರೆ. ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ನನ್ನ ಪರವಾಗಿ ಮತಯಾಚಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಜನಸೇವೆ ಮಾಡುತ್ತೇನೆ : ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಿರುವುದು ಮೈಸೂರು ಜಿಲ್ಲೆಗೆ ಹೆಮ್ಮೆಯ ಸಂಗತಿ. ಕಾಂಗ್ರೆಸ್ನ ಈ ಪ್ರಚಂಡ ಗೆಲುವು ಇನ್ನೂ ಇಪ್ಪತ್ತು ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರದಲ್ಲಿ ಇರುವುದನ್ನು ಸೂಚಿಸುತ್ತದೆ. ಈ ಗೆಲುವಿನ ಮೂಲಕ ಅತ್ಯಂತ ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿಯಿಂದ ಕ್ಷೇತ್ರದಲ್ಲಿ ಜನಸೇವೆ ಮಾಡುತ್ತೇನೆ ಎಂದು ಹೇಳಿದರು.
ಮೊನ್ನೆ ನಡೆದ ಮೊದಲ ಸಿಎಲ್ಪಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಮಾತನಾಡುತ್ತ, ನಿಮ್ಮ ಗೆಲುವಿಗೆ ಆಚೆ ನಿಂತಿರುವ ಕಾರ್ಯಕರ್ತರು ಕಾರಣ. ಹಾಗಾಗಿ ಅವರಿಗೆ ನೀವು ಸಹಕಾರ ಕೊಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಸದೃಢವಾಗಿರುತ್ತದೆ ಎಂದು ಹೇಳಿದ್ದರು. ಸುರ್ಜೇವಾಲ ಅವರು ಹೇಳಿದ ಮಾತಿಗೆ ಅನುಗುಣವಾಗಿ ನಿಮ್ಮೊಂದಿಗೆ ಯಾವಾಗಲೂ ಆಭಾರಿಯಾಗಿರುತ್ತೇವೆ. ನಿಮ್ಮ ಯಾವುದೇ ಕೆಲಸಗಳನ್ನು ಕಾನೂನು ಮೂಲಕ ಮಾಡುವೆ ಎಂದು ಭರವಸೆ ನೀಡಿದರು.
ಮುಂದೆ ನಗರಪಾಲಿಕೆ ಚುನಾವಣೆ ಇದ್ದು, ನಮಗೆ ಹೆಚ್ಚು ಜವಾಬ್ದಾರಿ ಇದೆ. ಜಿಲ್ಲಾಧ್ಯಕ್ಷರ ಮಾತಿಗೆ ಎಂದಿಗೂ ಧಿಕ್ಕರಿಸುವುದಿಲ್ಲ. ಯುವಕರು ತಮ್ಮ ನೋವನ್ನು ನಮಗೆ ಅರ್ಥೈಸಿದಾಗ ನಾನು ಖಂಡಿತಾ ನಿಮ್ಮ ನೋವಿಗೆ ಸ್ಪಂದಿಸುವೆ. ನನಗೆ ಇದುವರೆಗೆ ಯಾವುದೇ ಸಣ್ಣ ಅಧಿಕಾರ ಸಿಕ್ಕಿರಲಿಲ್ಲ. ಈಗ ದೊಡ್ಡ ಅಧಿಕಾರ ಸಿಕ್ಕಿದೆ. ನಮ್ಮನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ: ಹೆಚ್ ಡಿ ಕೋಟೆ ಶಾಸಕ ಅನೀಲ್ ಚಿಕ್ಕಮಾದು ಮಾತನಾಡಿ, ಶಾಸಕ ಸ್ಥಾನ ಎಂಬುದು ಅಷ್ಟು ಸುಲಭವಲ್ಲ. ನಮ್ಮ ತಂದೆ ಅವರು ಜಿಲ್ಲಾ ಪಂಚಾಯತ್ ಸದಸ್ಯರಿಂದ ಶಾಸಕರವರೆಗೂ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಕೋಟೆಯ ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಇಲ್ಲಿ ಒಮ್ಮೆ ಗೆದ್ದವರೂ ಮತ್ತೊಮ್ಮೆ ಗೆಲ್ಲಲು ಸಾಧ್ಯವಿಲ್ಲ ಎಂಬ ಮಾತನ್ನು ನಾವು ಅಳಿಸಿಹಾಕಿದ್ದೇವೆ. ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಸಿದ್ದರಾಮಯ್ಯ ಹಾಗೂ ನನ್ನ ರಾಜಕೀಯ ಗುರು ಧ್ರುವ ನಾರಾಯಣ್ ಅವರ ಪಾತ್ರ ಹೆಚ್ಚು. ಅವರು ನನ್ನನ್ನು ಗುರುತಿಸಿ ಅವಕಾಶ ಕೊಡಿಸಿದ್ದಾರೆ. ಶಾಸಕನಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
ನನ್ನ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೂ ಧನ್ಯವಾದ ತಿಳಿಸುತ್ತೇನೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಮೈಸೂರು ಭಾಗದ ಬಗ್ಗೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆ. ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮರಣೆ ಮಾಡಲಾಯಿತು. ಶಾಸಕ ರವಿಶಂಕರ್, ದರ್ಶನ್ ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ, ಮಾಜಿ ಸಂಸದ ಕಾಗವಾಡಿ ಶಿವಣ್ಣ, ಮಾಜಿ ಅಧ್ಯಕ್ಷ ಮರಿಗೌಡ, ಡಿಸಿಸಿ ಸದಸ್ಯ ಶಿವಣ್ಣ, ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಸುಸಿಲಕೇಶವ ಮೂರ್ತಿ, ಲತಾ ಶೆಟ್ಟಿ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ ಜೆ ವಿಜಯಕುಮಾರ್, ನಗರ ಅಧ್ಯಕ್ಷ ಆರ್ ಮೂರ್ತಿ ಹಾಗೂ ಇತರರು ಇದ್ದರು.
ಇದನ್ನೂ ಓದಿ: ಹಾವೇರಿಯ ಕಾಂಗ್ರೆಸ್ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ಲಾಬಿ