ಮೈಸೂರು: ಮುಂದಿನ ನಾಲ್ಕೈದು ವಾರಗಳಲ್ಲಿ ಕೋವಿಡ್ ಲಸಿಕೆ ಬರುವ ಸಾಧ್ಯತೆ ಇದ್ದು, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳ ಸಭೆಗಳಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಎರಡು ದಿನಗಳ ಮೈಸೂರು ಪ್ರವಾಸದ ನಿಮಿತ್ತ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಮಾಧ್ಯಮಗಳ ಜೊತೆ ಮಾತನಾಡಿ, ಹೌಸಿಂಗ್ ಬೋರ್ಡ್ನಿಂದ ಕಟ್ಟಿದ ಕೆಲವು ಕಟ್ಟಡಗಳ ಉದ್ಘಾಟನೆ ಇದೆ. ನಾಳೆ ಪಂಚಲಿಂಗ ದರ್ಶನ ಇರಲಿದೆ. ನಾಡಿದ್ದು ಮಹದೇಶ್ವರ ಬೆಟ್ಟಕ್ಕೆ ಹೋಗುವ ಕಾರ್ಯಕ್ರಮಗಳು ಇವೆ ಎಂದರು.
ಪ್ರಧಾನಿಗಳ ಜೊತೆ ಮುಖ್ಯಮಂತ್ರಿಗಳು ಸಭೆ ನಡೆಸಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಂದು ಜಿಲ್ಲೆಗೂ ಬಂದ ಲಸಿಕೆಯನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡುವ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಕೋವಿಡ್ ವಿಚಾರದಲ್ಲಿ ಲಸಿಕೆ ಬರುವವರೆಗೂ ಎಚ್ಚರಿಕೆಯಿಂದ ಇರಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು.
ಕೋವಿಡ್ ಲಸಿಕೆ ಬರಲು ನಾಲ್ಕು ವಾರ ಆಗಬಹುದು ಎಂಬ ಸೂಚನೆ ಇದೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ನೀವು ಸಹ ಸಿದ್ಧತೆ ಮಾಡಿಕೊಳ್ಳಿ ಎಂದರು.