ಮೈಸೂರು : ಎರಡು ವರ್ಷದಲ್ಲಿ ಮುಡುಕುತೊರೆಯ ಶ್ರೀ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನ ದೇವಸ್ಥಾನದ ಸಂಕೀರ್ಣ ಪುನರ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ತಿ.ನರಸೀಪುರ ತಾಲೂಕಿನ ಮುಡುಕುತೊರೆ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಸಂಕೀರ್ಣದ ಪುನರ್ ನಿರ್ಮಾಣ ಶಂಕು ಸ್ಥಾಪನೆಗೆ ಚಾಲನೆ ನೀಡಿ ನಂತರ ಸಿಎಂ ಮಾತನಾಡಿದರು.
ತಲಕಾಡು ಹಾಗೂ ಮುಡುಕುತೊರೆ ಆಕರ್ಷಣೆಯಾಗಿದೆ. 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ಈಗಾಗಲೇ ₹5 ಕೋಟಿ ಬಿಡುಗಡೆಯಾಗಿದೆ. ಗುತ್ತಿಗೆದಾರರು ಹಗಲು ರಾತ್ರಿ ಕೆಲಸ ಮಾಡಬೇಕು. 136 ದೇವಾಲಯಗಳಿಗೆ ₹136 ಕೋಟಿ ನೀಡಲಾಗಿದೆ. ರಾಜ್ಯದಲ್ಲಿ ಧಾರ್ಮಿಕ ಕಾರ್ಯಗಳಿಗೆ ಹಣದ ಕೊರತೆ ಎದುರಾಗುವುದಿಲ್ಲ ಎಂದು ತಿಳಿಸಿದರು. ಸಾಮಾನ್ಯವಾಗಿ ಸುತ್ತೂರು ಶ್ರೀಗಳು ಇಂತಹ ಕಾರ್ಯಕ್ರಮಕ್ಕೆ ಬರುವುದು ಅಪರೂಪ. ದೇವರು ಇಲ್ಲಿಗೆ ಕರೆಸಿಕೊಂಡಿದ್ದಾನೆ ಎಂದರು.
ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಮಾತನಾಡಿ, ದೇವಸ್ಥಾನದ ಕಾಮಗಾರಿಗೆ 15 ಕೋಟಿ ರೂ. ಮಂಜೂರು ಮಾಡಿದ್ದಾರೆ. 2020ನೇ ಸಾಲಿನಲ್ಲಿ ಪಂಚಲಿಂಗ ದರ್ಶನದ ರಸ್ತೆಗಳ ಅಭಿವೃದ್ಧಿಗಾಗಿ 17 ಕೋಟಿ ರೂ. ನೀಡಲು ಸೂಚನೆ ಕೊಟ್ಟಿದ್ದಾರೆ ಎಂದರು. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕಟ್ಟಡ, ರಸ್ತೆ, ದುರಸ್ಥಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಕೆಲಸ ಮಾಡಲು ₹5200 ಕೋಟಿ ನೀಡಲಾಗಿದೆ ಎಂದರು.
ಇನ್ನು ಶಾಸಕ ಅಶ್ವಿನ್ ಕುಮಾರ್, ತಿ.ನರಸೀಪುರ ಕ್ಷೇತ್ರವನ್ನು ಪ್ರವಾಸಿತಾಣ ಪಟ್ಟಿಗೆ ಸೇರಿಸಿಬೇಕು, ತಲಕಾಡು ಹೋಬಳಿಯನ್ನು ಪಟ್ಟಣ ಪಂಚಾಯತ್‌ಗೆ ಸೇರಿಸಿಬೇಕು, ತಲಕಾಡಿನಲ್ಲಿರುವ ಐತಿಹಾಸಿಕ ಅವಶೇಷಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸ್ತು ಪ್ರದರ್ಶನ ಮಾಡಬೇಕು ಹಾಗೂ ಪಂಚಲಿಂಗ ದರ್ಶನಕ್ಕೆ ಒತ್ತು ಕೊಡಬೇಕು ಎಂದು ಸಿಎಂಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಎಸ್ ಟಿ ಸೋಮಶೇಖರ್, ಶಾಸಕ ರಾಮದಾಸ್ ಸೇರಿದಂತೆ ಇತರರು ಇದ್ದರು.