ಮೈಸೂರು: ಸಿಎಂ ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟು ಹೆಚ್ಚುವರಿ ಇಲಾಖೆಯ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಹೀಗಾಗಿ, ಎರಡು ಇಲಾಖೆಗಳಲ್ಲಿಯೂ ಉತ್ತಮ ಕೆಲಸ ಮಾಡುತ್ತೇನೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಇಂದು ತಮ್ಮ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲು ನಗರಕ್ಕೆ ಆಗಮಿಸಿದ್ದ ಸಚಿವ ಸುಧಾಕರ್ ಮಾಧ್ಯಮದವರೊಂದಿಗೆ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸವಾಲಿನದ್ದಾಗಿದೆ. ಅದರಲ್ಲೂ ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಸವಾಲು ಮತ್ತಷ್ಟು ಹೆಚ್ಚಾಗಿದೆ. ಕೊರೊನಾ ನಿಯಂತ್ರಣದ ಜೊತೆಗೆ ಅನೇಕ ರೋಗಿಗಳನ್ನು ಕೂಡ ನಿಯಂತ್ರಿಸುವುದು ನನಗೆ ಚಾಲೆಂಜ್ ಆಗಿದೆ ಎಂದರು.
ಸಾಮಾನ್ಯ ಜನರಿಗೂ ಕೈಗೆಟುಕುವ ರೀತಿಯಲ್ಲಿ ಗುಣಮಟ್ಟದ ಸೇವೆಯನ್ನು ಒದಗಿಸುತ್ತಾರೆಂಬ ಭರವಸೆಯಿಂದ ಮುಖ್ಯಮಂತ್ರಿಗಳು ಈ ಜವಾಬ್ದಾರಿಯನ್ನು ವಹಿಸಿದ್ದಾರೆ. ಹೀಗಾಗಿ, ರಾಜ್ಯದ ಆರೂವರೆ ಕೋಟಿ ಜನರಿಗೂ ಈ ಸೇವೆ ಸಿಗುವ ರೀತಿಯಲ್ಲಿ ಹೊಸ ರಚನಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಸುಧಾಕರ್ ಹೇಳಿದರು.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸಾವಿನ ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ಶೇ 1ಕ್ಕೆ ಇಳಿಸುವ ಬಗ್ಗೆ ಇಂದು ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ ಎಂದ ಸಚಿವರು, ಇನ್ನು ದೇಶದ ಎಲ್ಲಾ ರಾಜ್ಯಗಳಲ್ಲೂ ಆರೋಗ್ಯ ಮತ್ತು ವೈದ್ಯಕೀಯ ಸಚಿವರು ಒಬ್ಬರೇ ಇರುತ್ತಾರೆ. ಆದರೆ, ಕರ್ನಾಟಕದಲ್ಲಿ ಹೆಚ್ಚಿನ ಸಚಿವರನ್ನು ಮಾಡುವ ಸಂದರ್ಭದಲ್ಲಿ ಬೇರೆ ಕಡೆ ಖಾತೆ ಹಂಚಿಕೆಯಾಗಿದ್ದು, ಈಗ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳು ಒಟ್ಟಿಗೆ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಆರೋಗ್ಯ ಖಾತೆಯನ್ನು ನಿರ್ವಹಿಸಲು ಶ್ರೀರಾಮುಲು ಅವರಿಗೆ ಸಾಧ್ಯವಾಗಿಲ್ಲ ಎಂಬ ಕಳಂಕ ಬರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆ ರೀತಿಯ ಯಾವುದೇ ಕಳಂಕವಿಲ್ಲ. ನಾನು, ಅವರು, ಅಶ್ವತ್ಥ್ ನಾರಾಯಣ್, ಬಸವರಾಜ್ ಬೊಮ್ಮಾಯಿ ಎಲ್ಲಾ ಸಚಿವರು ಕೋವಿಡ್ ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಇದ್ದೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಇಲ್ಲಿ ಯಾವುದೇ ವೈಯಕ್ತಿಕ ಪ್ರತಿಷ್ಠೆಯಾಗಲೀ, ಒಬ್ಬರನ್ನು ಅವಮಾನ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲವೆಂದು ಸ್ಪಷ್ಟಪಡಿಸಿದರು.
ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಭಿನ್ನಮತ ಉಂಟಾಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಳೆದ ಒಂದು ವಾರದಿಂದ ಮುಖ್ಯಮಂತ್ರಿಗಳು ಸಚಿವ ಶ್ರೀರಾಮುಲು ಅವರನ್ನು ಕರೆಸಿ ಮಾತನಾಡಿದ್ದಾರೆ. ಅವರಿಗೆ ಸಮಾಜ ಕಲ್ಯಾಣ ಇಲಾಖೆ ಕೊಟ್ಟಿದ್ದಾರೆ. ಅವರಿಗೆ ಶೋಷಿತ ವರ್ಗಗಳ ಅಭಿವೃದ್ಧಿಗೆ ಮಹತ್ವದ ಖಾತೆಯನ್ನು ಕೊಟ್ಟಿರುವುದರಿಂದ ಯಾರಿಗೂ ಬೇಸರ ಇಲ್ಲವೆಂದು ಅಭಿಪ್ರಾಯಪಟ್ಟರು.
ದಸರಾದಲ್ಲಿ ಕೋವಿಡ್ ನಿಯಮ ಪಾಲನೆ: ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಬೇಕು. ಈ ಹಬ್ಬದಿಂದ ಕೋವಿಡ್ ಮತ್ತಷ್ಟು ಹೆಚ್ಚಾಗಬಾರದು. ಎಲ್ಲರೂ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದರು.