ಮೈಸೂರು: ಕ್ರೈಮ್ ವೈಭವೀಕರಣ, ಲಾಂಗು, ಡ್ಯಾನ್ಸ್, ರೇಪ್, ಮದ್ಯ, ನಶೆ, ಕತ್ತಲೆಯ ಪ್ರಪಂಚ, ಶ್ರೀಮಂತಿಕೆಯ ವೈಭವೀಕರಣ ಸಿನಿಮಾ ರಂಗದಲ್ಲಿ ಆಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಿಸಿದರು.
ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಮಡಿವಂತಿಕೆ ಬೇಡ. ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಸರ್ಕಾರ ಡ್ರಗ್ಸ್ ಮಾಫಿಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ತೊಡಗಿಸಿಕೊಂಡಿರುವವರನ್ನು ಮಟ್ಟಹಾಕಬೇಕು ಎಂದರು.
ಇಂದ್ರಜಿತ್ ಲಂಕೇಶ್ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು:
ಡ್ರಗ್ಸ್ ವಿಚಾರ ಬೆಳಕಿಗೆ ತಂದ ಇಂದ್ರಜಿತ್ ಲಂಕೇಶ್ ಅವರನ್ನು ಈಗ ಗೇಲಿ ಮಾಡಲಾಗುತ್ತಿದೆ. ನನಗೆ ರಕ್ಷಣೆ ನೀಡಿದರೆ ಎಲ್ಲವನ್ನೂ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿ ಇಲ್ಲಿಯತನಕ ಆಡಳಿತ ನಡೆಸಿದ ಯಾವುದೇ ಸರ್ಕಾರವನ್ನು ಇದಕ್ಕೆ ಹೊಣೆ ಮಾಡುವುದು ಸರಿಯಲ್ಲ. ಇದನ್ನು ನಮಗರಿವಿಲ್ಲದೇ ನಾವೇ ನಡೆಸಿಕೊಂಡು ಬಂದಿದ್ದೇವೆ. ಈ ದಂಧೆ ಹಲವು ಹಂತಗಳಲ್ಲಿ ಬೆಳೆದು ಇದೀಗ ಸೆಲೆಬ್ರಿಟಿ ಹಂತಕ್ಕೆ ಬಂದು ನಿಂತಿದೆ ಎಂದು ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆ ಮಾಡಬೇಕಾದ ಕೆಲಸವನ್ನೂ ಸೆಲೆಬ್ರಿಟಿಯೇ ಮಾಡಿದ್ದಾರೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ. ಈ ವಿಚಾರ ಗಂಭೀರವಾಗಿದ್ದು, ಇದರ ಗಾಂಭೀರ್ಯತೆಯನ್ನು ಅರಿತು ಮಾತನಾಡಬೇಕು ಎಂದು ಹೇಳಿದರು.
ಪೊಲೀಸರಿಗೆ ಗೊತ್ತಿಲ್ಲದೇ ಇರುವುದು ಏನೂ ಇಲ್ಲ. ಡ್ರಗ್ಸ್ ಮಾಫಿಯಾ ವಿಚಾರ ಪೊಲೀಸರಿಗೆ ಗೊತ್ತಿದ್ದರೂ ಈ ಬಗ್ಗೆ ಇಂದ್ರಜಿತ್ ಲಂಕೇಶ್ ಬಂದು ಹೇಳಬೇಕಾಯಿತು ಅಷ್ಟೇ. ಡ್ರಗ್ಸ್ ಮಾಫಿಯಾದಿಂದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಲ್ಲಾಡಿ ಹೋಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಈ ಮಾಫಿಯಾ ವ್ಯಾಪಿಸುತ್ತಿದೆ. ಇದರಲ್ಲಿ ಪ್ರಭಾವಿ ಕುಟುಂಬಗಳ ಪಾತ್ರವಿದೆ. ಈ ವಿಚಾರದಲ್ಲಿ ಇಡೀ ಸಮಾಜ ಜಾಗೃತವಾಗಿರಬೇಕು ಎಂದು ಹೆಚ್ ವಿಶ್ವನಾಥ್ ಎಚ್ಚರಿಸಿದರು.
ರೇವ್ ಪಾರ್ಟಿ ಮಾಡುವವರು ಯಾರು? ಇಂದು ಚಿತ್ರರಂಗ ಏನಾಗಿದೆ?. ಸಿನಿಮಾ ರಂಗದಲ್ಲಿ ಕ್ರೈಮ್ ವೈಭವೀಕರಣ, ಲಾಂಗು, ಡ್ಯಾನ್ಸ್, ರೇಪ್, ಮದ್ಯ, ನಶೆ, ಕತ್ತಲೆಯ ಪ್ರಪಂಚ ಹಾಗೂ ಶ್ರೀಮಂತಿಕೆಯ ವೈಭವೀಕರಣವಾಗುತ್ತಿದೆ. ಪೊಲೀಸರಿಗೆ ಎಲ್ಲಾ ಗೊತ್ತಿದ್ದರೂ ಏನನ್ನೂ ಹೇಳಲಾಗುತ್ತಿಲ್ಲ. ಇದಕ್ಕೆ ಪ್ರಮುಖವಾಗಿ ಸ್ಥಳದ ರಾಜಕಾರಣ ಕಾರಣವಾಗಿದೆ ಎಂದು ಹೇಳಿದರು.
ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ನಮ್ಮ ಮನೆಯ ಮಕ್ಕಳು ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಿ. ಈ ವಿಚಾರದಲ್ಲಿ ನಮ್ಮ ಮಕ್ಕಳು, ನಮ್ಮ ಪಕ್ಷ, ನಮ್ಮ ಜಾತಿ ಎಂದು ತಪ್ಪಿತಸ್ಥರ ರಕ್ಷಣೆಗೆ ಮುಂದಾಗಬಾರದು ಎಂದರು.