ಮೈಸೂರು : ಈ ವರ್ಷ ಲಾಕ್ಡೌನ್ ಇದ್ದ ಪರಿಣಾಮ ಕಳೆದ 6 ತಿಂಗಳಿನಲ್ಲಿ ಕೇವಲ 13 ಚಿಕೂನ್ ಗುನ್ಯಾ ಪ್ರಕರಣ ಮಾತ್ರ ಜಿಲ್ಲೆಯಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ರೋಗವಾಹಕ ನಿಯಂತ್ರಣ ಅಧಿಕಾರಿ ಡಾ. ಚಿದಂಬರಂ ತಿಳಿಸಿದ್ದಾರೆ.
![chicken gunya is under disease control dr chidambaram](https://etvbharatimages.akamaized.net/etvbharat/prod-images/kn-mys-6-chikungunya-special-story-chairman-sir-suggested-story-7208092_24082020162527_2408f_01638_664.jpg)
ಕೊರೊನಾ ನಡುವೆ ಚಿಕೂನ್ ಗುನ್ಯಾ ಪ್ರಕರಣಗಳ ಸ್ಥಿತಿಗತಿ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಚಿಕೂನ್ ಗುನ್ಯಾ ರೋಗಕ್ಕೂ ಸಹ ಯಾವುದೇ ಅಧಿಕೃತ ಲಸಿಕೆ ಕಂಡು ಹಿಡಿದಿಲ್ಲ. ಕಾರಣ ಪ್ರಕೃತಿಯಲ್ಲಿ ಚಿಕೂನ್ ಗುನ್ಯಾ ಇನ್ನೂ ಉಳಿದುಕೊಂಡಿದೆ. ಸಂಪೂರ್ಣ ಅದು ನಮ್ಮಿಂದ ಹೋಗಿಲ್ಲ. ಚಿಕೂನ್ ಗುನ್ಯಾ ಎಂಬುದು ಸೊಳ್ಳೆಯಿಂದ ಹರಡುವ ರೋಗವಾದರೂ ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದೆ ಎಂದು ರೋಗದ ಲಕ್ಷಣಗಳನ್ನು ವಿವರಿಸಿದರು.
ನಮ್ಮ ದೇಶದಲ್ಲಿ 2007-08ರಲ್ಲಿ ಈ ರೋಗ ಶೇ. 80ರಷ್ಟು ಆವರಿಸಿತ್ತು. ಆದರೆ, ಚಿಕೂನ್ ಗುನ್ಯಾ ಮಾರಣಾಂತಿಕ ರೋಗವಲ್ಲದ ಕಾರಣ ಜನರು ಅಷ್ಟಾಗಿ ಭಯಪಡುತ್ತಿಲ್ಲ. ಆದರೆ, ವ್ಯಕ್ತಿಯಲ್ಲಿ ರೋಗ ಕಾಣಿಸಿಕೊಂಡರೆ ಮೈ-ಕೈ ನೋವು, ಕೀಲು ನೋವು ಬರುವುದು ಸಾಮಾನ್ಯ ಎಂದರು.
ಚಿಕೂನ್ ಗುನ್ಯಾ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯಿಂದ ಬರುತ್ತದೆ. ನೀರು ಸಂಗ್ರಹವಾಗಿರುವ ಪ್ರದೇಶದ ವಾತಾವರಣದಲ್ಲಿರುವ ಮಾನ್ಸೂನ್ ಕಾಲದಲ್ಲಿ ಈ ಕಾಯಿಲೆ ಹೆಚ್ಚಾಗಿ ಹರಡುತ್ತದೆ. ಒಂದು ಬಾರಿ ಬಂದರೆ ಮತ್ತೆ ಇನ್ನೊಂದು ಬಾರಿ ಈ ರೋಗ ಬರುವುದಿಲ್ಲ. ಲಾಕ್ಡೌನ್ ಇದ್ದ ಪರಿಣಾಮ ಜನರ ಓಡಾಟ ಕಡಿಮೆ ಇತ್ತು. ಇದರಿಂದ ಪರಿಸರವೂ ಸಹ ಚೆನ್ನಾಗಿತ್ತು.
ಆದ್ದರಿಂದ ಈ ವರ್ಷದ ಪ್ರಾರಂಭದಿಂದ ಈವರೆಗೆ ಜಿಲ್ಲೆಯಲ್ಲಿ ಶೇ. 50ರಷ್ಟು ಚಿಕೂನ್ ಗುನ್ಯಾ ಪ್ರಕರಣ ಕಡಿಮೆಯಾಗಿವೆ. ಕೇವಲ 13 ಪ್ರಕರಣ ಮಾತ್ರ ವರದಿಯಾಗಿವೆ. ಅದೇ ರೀತಿ ಮಲೇರಿಯಾ ಮತ್ತು ಡೆಂಘೀ ಸಹ ಕಡಿಮೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಚಿಕೂನ್ ಗುನ್ಯಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದು ತುಂಬಾ ಕಡಿಮೆಯಾಗಿದೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಒಂದೊಂದು ಪ್ರಕರಣ ವರದಿಯಾಗಿದ್ದು ಬಿಟ್ಟರೆ ಸ್ವಲ್ಪ ಹತೋಟಿಯಲ್ಲಿದೆ ಎನ್ನುತ್ತಾರೆ ಡಾ. ಚಿದಂಬರಂ.