ಮೈಸೂರು: ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪರಿಚಯವಾದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ನಂತರ ಕೊಲೆ ಬೆದರಿಕೆ ಹಾಕಿರುವ ಘಟನೆ ನಗರದ ಮಂಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಯುವತಿಯು ತನ್ನ ಬಯೋಡೇಟಾ ಹಾಕಿದ್ದಳು. ಈ ಬಯೋಡೇಟಾವನ್ನು ನೋಡಿ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಸಂದೇಶ್ ಎಂಬಾತ ತಾನು ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕ ಎಂದು ಪರಿಚಯ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ನಂತರ ಮದುವೆಯಾಗುವುದಾಗಿ ನಂಬಿಸಿ ಯುವತಿಯ ಬೆತ್ತಲೆ ಫೋಟೋ ಕಳುಹಿಸುವಂತೆ ಒತ್ತಡ ಹಾಕಿದ್ದಾನೆ. ಸಂದೇಶ್ ಮಾತು ಕೇಳಿ ಯುವತಿ ತನ್ನ ಫೋಟೋ ಕಳುಹಿಸಿದ್ದಳಂತೆ. ಬಳಿಕ ಆಕೆಯ ಜೊತೆ ವಿವಿಧೆಡೆ ಸುತ್ತಾಡಿದ್ದಾನೆ. ಒಂದು ದಿನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು, ಮರುದಿನ ಬೆಳಿಗ್ಗೆ ಯುವತಿ ಕರೆ ಮಾಡಿದಾಗ ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷಯ ತಿಳಿದ ಯುವತಿ ಪೋಷಕರು ಆರೋಪಿ ಸಂದೇಶನನ್ನು ಮನೆಗೆ ಕರೆಸಿ ಮನವೊಲಿಸಿದ್ದಾರೆ. ಇದಕ್ಕೆ ಒಪ್ಪದ ಸಂದೇಶ್ ಕೊಲೆ ಬೆದರಿಕೆ ಹಾಕಿದ್ದಾನಂತೆ. ಆದ್ದರಿಂದ ಯುವತಿ ಪೋಷಕರು ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.