ಮೈಸೂರು: ಮದುವೆ ಮಂಟಪಕ್ಕೆ ಬಂದು ಪರಿಚಯಸ್ಥರಂತೆ ವರ್ತಿಸಿ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಯುವಕನನ್ನು ಹುಣಸೂರು ನಗರ ಪೊಲೀಸರು ಬಂಧಿಸಿದ್ದಾರೆ.
ಹುಣಸೂರು ಪಟ್ಟಣದ ಛತ್ರದಲ್ಲಿ ಶನಿವಾರ ಸಂಜೆ ಮದುವೆ ಕಾರ್ಯಕ್ರಮಕ್ಕೆ ಪರಿಚಯಸ್ಥರಂತೆ ಬಂದು ಚಿನ್ನದ ಸರ ಕದ್ದು ಪರಾರಿಯಾಗಿದ್ದ ಹೇಮಂತ್ (23) ಬಂಧಿತ ಆರೋಪಿ. ಈತ ಮದುವೆ ಛತ್ರಕ್ಕೆ ಬಂದು ಅಲ್ಲಿ ಮದುವೆ ಮನೆಯವರಾದ ಸುನೀಲ್ ಮತ್ತು ವೆಂಕಟೇಶ್ ಎಂಬುವವರನ್ನು ಪರಿಚಯ ಮಾಡಿಕೊಂಡಿದ್ದಾನೆ. ಶನಿವಾರ ರಾತ್ರಿ ಅವರೊಂದಿಗೆ ರೂಂನಲ್ಲಿ ಮಲಗಿದ್ದ ಸಂದರ್ಭದಲ್ಲಿ ಸುನೀಲಲ್ನ ಕತ್ತಿನಲ್ಲಿ ಇದ್ದ 21 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಹುಣಸೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿ ಹೇಮಂತ್ನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಾಗ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ಚಿನ್ನದ ಸರವನ್ನು ವಶಪಡಿಸಿಕೊಂಡು ಹೇಮಂತ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.