ಮೈಸೂರು: ಟ್ರಯಲ್ಗೆ ತೆಗೆದುಕೊಂಡು ಹೋದ ಕಾರು ಅಪಘಾತಕ್ಕೀಡಾಗಿದ್ದು, ಅಪಘಾತ ಸ್ಥಳದಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ನಗರದ ಹೊರವಲಯದ ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಕೊಂಡುಕೊಳ್ಳಲೆಂದು, ಟ್ರಯಲ್ ನೋಡುವುದಾಗಿ ಹೇಳಿ ಅಶೋಕಪುರಂ ನಿವಾಸಿ ರವಿ ಕುಮಾರ್ ಎಂಬವರು ಕಾರು ತೆಗೆದುಕೊಂಡು ಹೋಗಿದ್ದರು. ಆ ಕಾರಿನಲ್ಲಿ ಅವರ ಜೊತೆ ಭಾಸ್ಕರ್, ರವಿ, ಸಂದೇಶ್ ಹಾಗೂ ಶಿವಕುಮಾರ್ ಎಂಬವರು ತೆರಳಿದ್ದರು. ಕಾರು ಮಾನಂದವಾಡಿ ರಸ್ತೆಯ ಬಳಿ ನಿಯಂತ್ರಣ ತಪ್ಪಿ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದ್ದು, ಆನಂತರ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದು ವಿದ್ಯುತ್ ತಂತಿ ಕಾರಿಗೆ ತಗುಲಿದೆ.
ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಡ್ರೈವರ್ ಕಿರಣ್ ಇವರ ಸಹಾಯಕ್ಕೆ ಬಂದಿದ್ದಾರೆ. ತುಂಡಾದ ವಿದ್ಯುತ್ ತಂತಿ ತಾಗಿ ರವಿ ಕುಮಾರ್ ಹಾಗೂ ಸಹಾಯ ಮಾಡಲು ಬಂದ ಕಿರಣ್ ಇಬ್ಬರೂ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ರವಿ, ಸಂದೇಶ್, ಶಿವಕುಮಾರ್ ಅವರಿಗೂ ಶಾಕ್ ಹೊಡೆದಿದೆ. ಮತ್ತೊಬ್ಬ ಭಾಸ್ಕರ್ ಎಂಬವರು ಅದೃಷ್ಟವಶಾತ್ ಆಪಾಯದಿಂದ ಪಾರಾಗಿದ್ದಾರೆ.
ಇಬ್ಬರ ಶವಗಳನ್ನು ಶವಾಗಾರಕ್ಕೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ಒಪ್ಪಿಸಲಿದ್ದಾರೆ. ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿದ್ಯುತ್ ತಗುಲಿ ಯುವಕ ಸಾವು: ಯುವಕನೋರ್ವ ಮೊಬೈಲ್ ಚಾರ್ಜ್ ಹಾಕಲು ಹೋಗಿ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ಚಿಕ್ಕೋಡಿಯಲ್ಲಿ ನಡೆದಿತ್ತು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶಿರಪ್ಪೆವಾಡಿ ಗ್ರಾಮದ 27 ವರ್ಷದ ಆಕಾಶ್ ಸಂಕಪಾಳ ಮುಂಜಾನೆ ಮೊಬೈಲ್ ಅನ್ನು ಚಾರ್ಜ್ಗೆ ಹಾಕಲು ಹೋಗಿದ್ದು, ಆ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು.
ವಿದ್ಯುತ್ ಸ್ಪರ್ಶಿಸಿ ನಟ ಸೂರ್ಯ ಅಭಿಮಾನಿಗಳಿಬ್ಬರು ಸಾವು: ಇತ್ತೀಚೆಗೆ ತಮಿಳು ನಟ ಸೂರ್ಯ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸೂರ್ಯ ಅವರ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕುವ ವೇಳೆ ಅವರ ಇಬ್ಬರು ಅಭಿಮಾನಿಗಳು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.
ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್ಗೆ ಲಾರಿ ಡಿಕ್ಕಿ.. ಒಂದೇ ಕುಟುಂಬದ ಮೂವರ ದುರ್ಮರಣ