ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿದೆ. ನಾಲ್ಕನೇ ಬಾರಿಗೆ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲು ಸಿದ್ದವಾಗುತ್ತಿರುವ ಕ್ಯಾಪ್ಟನ್ ಅಭಿಮನ್ಯು ಆನೆಯನ್ನು ವಿಶೇಷ ಆತಿಥ್ಯದೊಂದಿಗೆ ತಯಾರು ಮಾಡಲಾಗುತ್ತಿದೆ.
ಈಗಾಗಲೇ 3 ಬಾರಿ ಅಂಬಾರಿ ಹೊತ್ತಿರುವ 'ಆಪರೇಷನ್ ಕಿಂಗ್' ಅಭಿಮನ್ಯು ಸೈ ಎನ್ನಿಸಿಕೊಂಡಿದ್ದಾನೆ. ಈ ಬಾರಿಯೂ ಗಣಪಡೆಯನ್ನು ಮುನ್ನಡೆಸುತ್ತಿದ್ದು, ಪ್ರತಿನಿತ್ಯ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಸೆಪ್ಟೆಂಬರ್ 5ರಂದು ಮೊದಲ ಹಂತದ ಗಜಪಡೆಯ ನೇತೃತ್ವ ವಹಿಸಿದ್ದ ಅಭಿಮನ್ಯು ಅರಮನೆ ಆವರಣ ಪ್ರವೇಶ ಮಾಡಿತ್ತು. ಬಳಿಕ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದೆದುರು ಪ್ರತ್ಯೇಕವಾಗಿ ನಿರ್ಮಾಣ ಮಾಡಿರುವ ಆನೆ ಶಿಬಿರದಲ್ಲಿ ಸಿಸಿಟಿವಿ ಭದ್ರತೆಯಲ್ಲಿರುವ ಅಭಿಮನ್ಯು ಜೊತೆಗೆ ಉಳಿದ ಆನೆಗಳಿಗೂ ವಿಶೇಷ ಆರೈಕೆ ನಡೆಯುತ್ತಿದೆ.
ಪ್ರತಿನಿತ್ಯ ಬೆಳಿಗ್ಗೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಜಂಬೂಸವಾರಿ ತಾಲೀಮು ನಡೆಸಿ ವಾಪಸ್ ಶಿಬಿರಕ್ಕೆ ಬಂದಾಗ ಕಾಳುಗಳಿಂದ ತಯಾರಿಸಿದ ವಿಶೇಷ ಆಹಾರ, ಮುದ್ದೆ ಹಾಗೂ ಶಿಬಿರದಲ್ಲಿ ಭತ್ತದ ಹುಲ್ಲಿನಿಂದ ಬೆಲ್ಲ, ಹಸಿರು ಸೊಪ್ಪುಗಳನ್ನು ಅಭಿಮನ್ಯುವಿಗೆ ನೀಡಲಾಗುತ್ತಿದೆ. ಇದಾದ ನಂತರ ಅಲ್ಲೇ ಇರುವ ನೀರಿನ ಕೊಳದಲ್ಲಿ ಬೆನ್ನು, ತಲೆ, ಕಾಲುಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವ ಮಾವುತರು ಹಾಗೂ ಕವಾಡಿಗರು ಸ್ನಾನ ಮಾಡಿಸುತ್ತಾರೆ. ಸಂಜೆ ಪುನಃ ಜಂಬೂಸವಾರಿ ತಾಲೀಮು ನಡೆಯುತ್ತಿದ್ದು, ಬಳಿಕ ಶಿಬಿರಕ್ಕೆ ಆಗಮಿಸುವ ವೇಳೆ ವಿಶೇಷ ಆಹಾರ ನೀಡಲಾಗುತ್ತಿದೆ.
ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಅಭಿಮನ್ಯು 5,160 ಕೆಜಿ ತೂಕ ಇತ್ತು. 21 ದಿನಗಳ ಬಳಿಕ ಎರಡನೇ ಹಂತದ ಗಜಪಡೆ ಆಗಮಿಸಿದ ವೇಳೆಗೆ ಮತ್ತೆ ತೂಕ ಹಾಕಿದಾಗ 140 ಕೆಜಿ ತೂಕ ಹೆಚ್ಚಾಗಿದ್ದು, 5,300 ಕೆಜಿ ತೂಕ ಹೊಂದಿದ್ದಾನೆ. ವಿಜಯ ದಶಮಿಯವರೆಗೆ ಪೌಷ್ಟಿಕ ಆಹಾರಗಳನ್ನು ತಿಂದು ಮತ್ತಷ್ಟು ದಷ್ಟಪುಷ್ಟವಾಗಿ ಚಿನ್ನದ ಅಂಬಾರಿ ಹೊರಲು ಅಭಿಮನ್ಯು ತಯಾರಾಗುತ್ತಿದ್ದಾನೆ. ಈ ಬಾರಿ ದಸರಾದಲ್ಲಿ ಭಾಗವಹಿಸಲು 14 ಆನೆಗಳು ಆಗಮಿಸಿವೆ.
ಗಜಪಡೆಗೆ ನೀಡುವ ಆಹಾರದ ಮೆನು: ಬೆಳಗ್ಗೆ ಮತ್ತು ಸಂಜೆ ಮುದ್ದೆ, ಗ್ರೀನ್ ಗ್ರಾಂ, ಬ್ಲಾಕ್ ಗ್ರಾಂ, ವೀಟ್, ಬಾಯ್ಲ್ಡ್ ರೈಸ್ ಜೊತೆಗೆ ತರಕಾರಿ ಸೇರಿಸಿ ವಿಶೇಷ ಆಹಾರ ಹಾಗು ಭತ್ತದ ಹುಲ್ಲಿನ ಜೊತೆಗೆ ಬೆಲ್ಲ, ಸಕ್ಕರೆ ಸೇರಿದಂತೆ ಎಲ್ಲ ರೀತಿಯ ವಿಟಮಿನ್ ಇರುವ ಆಹಾರ ನೀಡಲಾಗುತ್ತಿದೆ. ಆರೋಗ್ಯ ತಪಾಸಣೆ ಪ್ರತಿನಿತ್ಯ ನಡೆಯುತ್ತಿದೆ. ಕಾವಾಡಿ, ಮಾವುತರ ಆರೋಗ್ಯ ಸೇರಿದಂತೆ ಎಲ್ಲವೂ ಚೆನ್ನಾಗಿದ್ದು, ಜಂಬೂಸವಾರಿಗೆ ಭರದ ಸಿದ್ಧತೆ ಸಾಗಿದೆ ಎಂದು ಇತ್ತೀಚಿಗೆ ಈಟಿವಿ ಭಾರತ್ ನಡೆಸಿದ ಸಂದರ್ಶನದಲ್ಲಿ ಡಿಸಿಎಫ್ ಸೌರವ್ ಕುಮಾರ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಮೈಸೂರು ದಸರಾ: ಅರಮನೆ ಅಂಗಳದಲ್ಲಿ ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ