ಮೈಸೂರು: ಈಗಾಗಲೇ ಕೇಂದ್ರ 1200 ಕೋಟಿ ರೂಪಾಯಿ ಘೋಷಿಸಿದೆ. ನಾನು ಕೂಡ ಮೂರು ದಿನ ಹಗಲು ರಾತ್ರಿ ಈ ಭಾಗದಲ್ಲಿದ್ದು ಜನರ ಅಹವಾಲು ಆಲಿಸಿದ್ದೇನೆ. ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ 5 ಲಕ್ಷದಲ್ಲಿ ಮೊದಲ ಹಂತವಾಗಿ 1 ಲಕ್ಷ ರೂಪಾಯಿಯನ್ನು ಮನೆಯ ಪಾಯ ತೆಗೆಯುವ ಕಾರ್ಯಕ್ಕೆ ನೀಡಿದ್ದೇವೆ. ಭಾಗಶಃ ಮನೆ ಕಳೆದುಕೊಂಡವರಿಗೆ ಒಂದು ಲಕ್ಷ ರೂಪಾಯಿವರೆಗೂ ಹೆಚ್ಚಿನ ಪರಿಹಾರ ನೀಡುತ್ತೇವೆ. ಈಗ ಕೇಂದ್ರ ಸರ್ಕಾರದ ಮೊದಲ ಹಂತದ ಪರಿಹಾರ ಧನ ಬಂದಿದೆ. ಮುಂದಿನ ಹಂತಗಳಲ್ಲಿ ಇನ್ನಷ್ಟು ಪರಿಹಾರ ಲಭಿಸಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಹೆಲಿಪ್ಯಾಡ್ಗೆ ಬಂದಿಳಿದ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಉತ್ಸವಗಳಲ್ಲಿ ಇದು ಒಂದಾಗಿದೆ. ವಿದ್ಯುದ್ದೀಪಗಳ ಅಲಂಕಾರ ಎಲ್ಲರ ಗಮನ ಸೆಳೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದು, ನಾಳಿನ ಸಮಾರಂಭಕ್ಕೆ ಎಲ್ಲರನ್ನು ಸ್ವಾಗತಿಸುತ್ತೇನೆ. ಇಂತಹ ಉತ್ಸವಗಳಲ್ಲಿ ಸಹಜವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಸಾರ್ವಜನಿಕ ವಲಯದಿಂದ ಪ್ರಶಂಸೆಯ ಮಾತುಗಳು;
ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಧನಾತ್ಮಕ ಹಾಗೂ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ. ಮೈಸೂರಿಗರು ಮಾತ್ರವಲ್ಲ ಹೊರಗಿನಿಂದ ಬಂದವರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ವ್ಯವಸ್ಥೆ ಉತ್ತಮವಾಗಿದೆ. ಚಾಮುಂಡಿ ಬೆಟ್ಟ ಸೇರಿದಂತೆ ಎಲ್ಲಾ ಕಡೆ ಸ್ವಚ್ಛತೆ ಕಾಪಾಡಲಾಗಿದೆ. ಮಳಿಗೆಗಳು ಹಾಗೂ ವಾಹನ ನಿಲುಗಡೆಗೆ ಸಹ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಕಾರ್ಯಗಳು ಜನರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಅಧಿವೇಶನ ನಂತರ ಇನ್ನಷ್ಟು ಹಣ ನೀಡಲಿದ್ದೇವೆ;
ಈ ಅಧಿವೇಶನದ ಮುಕ್ತಾಯದ ನಂತರ ರಾಜ್ಯ ಸರ್ಕಾರ ಕೂಡ ಇನ್ನಷ್ಟು ಹಣವನ್ನು ಪರಿಹಾರಕ್ಕೆಂದು ತೆಗೆದಿರಿಸಿದ್ದು, ಅದನ್ನು ನೀಡುವ ಕಾರ್ಯ ಮಾಡಲಿದ್ದೇವೆ. ಈ ಸಾರಿ ನೆರೆಯಿಂದ ಬಹಳ ದೊಡ್ಡ ಪ್ರಮಾಣದ ಅನಾಹುತವಾಗಿದ್ದು, ಇದಕ್ಕೆ ಸಂಪೂರ್ಣ ಪರಿಹಾರ ನೀಡುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ. ಕಾನೂನು ಚೌಕಟ್ಟಿನಲ್ಲಿ ಲಭ್ಯವಿರುವ ಅವಕಾಶವನ್ನು ಬಳಸಿಕೊಂಡು ಪರಿಹಾರ ಕಾರ್ಯ ಮುಂದುವರಿಸುತ್ತೇವೆ ಎಂದರು.
ಮಾಧುಸ್ವಾಮಿ ಮಾತು ಅಪಾರ್ಥ ಮಾಡಿಕೊಳ್ಳಲಾಗಿದೆ;
ನೆರೆ ಪರಿಹಾರ ಪಡೆಯಲು ರೈತರು ಮುಂದೆ ಬರುತ್ತಿಲ್ಲ ಎಂಬ ಹೇಳಿಕೆ ನೀಡಿರುವ ಮಾಧುಸ್ವಾಮಿ ವಿಚಾರವಾಗಿ ಮಾತನಾಡಿ, ಸಚಿವರು ಹೇಳಿದ ಮಾತನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ನೆರೆ ಸಮಸ್ಯೆಯಿಂದಾಗಿ ಮನೆಯ ದಾಖಲೆ ಪತ್ರಗಳನ್ನು ಕಳೆದುಕೊಂಡವರು ಮುಂದೆ ಬರಬೇಕು. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಯಾರಿಗೂ ತೊಂದರೆಯಾಗದಂತೆ ಕಚೇರಿಗಳಿಗೆ ಅಲೆಯುವ ಸ್ಥಿತಿ ತಪ್ಪಿಸುವಂತೆ ತಿಳಿಸಿದ್ದಾರೆ. ನಾನು ನನ್ನ ಮೂರು ದಿನಗಳ ಪ್ರವಾಸದ ಸಂದರ್ಭ ಜಿಲ್ಲಾಡಳಿತಗಳ ಜೊತೆ ಮಾತನಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಗಲು-ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಪರಿಹಾರದ ವಿಚಾರದಲ್ಲಿ ಯಾವುದೇ ತಪ್ಪು ಭಾವನೆ ಮಾಡುವುದು ಸರಿಯಲ್ಲ ಎಂದರು.