ಮೈಸೂರು: "ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಉನ್ನತ ಹುದ್ದೆ ನೀಡಿ, ಈ ಕ್ಷೇತ್ರಕ್ಕೆ ಈ ಸಲ ಬೇರೆ ವಿಪ್ರರಿಗೆ ಟಿಕೆಟ್ ನೀಡಬೇಕು" ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಕಾಶ್ ಹಾಗೂ ಇತರ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಂದು ಅವರು ಮಾತನಾಡಿದರು.
ಡಿ.ಟಿ.ಪ್ರಕಾಶ್ ಮಾತನಾಡಿ, "ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 75 ಸಾವಿರ ಬ್ರಾಹ್ಮಣ ಮತದಾರರು ಇರುವ ಕ್ಷೇತ್ರವೆಂದರೆ ಅದು ಮೈಸೂರು ನಗರದ ಕೃಷ್ಣರಾಜ ಅಂದರೆ ಕೆ.ಆರ್.ಕ್ಷೇತ್ರ. ಹಲವು ಬಾರಿ ಇಲ್ಲಿನ ಮತದಾರರು ವಿಪ್ರ ನಾಯಕರನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಆದರೆ ಹಾಲಿ ಶಾಸಕರನ್ನು ಸಹ ನಾವು ಗೆಲ್ಲಿಸಿದ್ದೆವು. ಇವರು ನಮ್ಮ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ".
"ವಿಪ್ರರ ಕಷ್ಟಗಳನ್ನು ಕೇಳುತ್ತಿಲ್ಲ. ಉದಾಹರಣೆಗೆ ಇಡಬ್ಲೂಎಸ್ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಹಾಲಿ ಶಾಸಕರಿಗೆ ಉನ್ನತ ಹುದ್ದೆ ನೀಡಿ ಅವರ ಅನುಭವವನ್ನು ಉಪಯೋಗಿಸಿಕೊಳ್ಳಿ. ಕ್ಷೇತ್ರಕ್ಕೆ ಬೇರೆ ವಿಪ್ರರಿಗೆ ಟಿಕೆಟ್ ನೀಡಿ. ನಾವು ಇಂಥವರಿಗೇ ಟಿಕೆಟ್ ನೀಡಿ ಎಂದು ಹೇಳುವುದಿಲ್ಲ. ಬಹಳಷ್ಟು ಜನ ವಿಪ್ರ ನಾಯಕರಿದ್ದಾರೆ. ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಡಿ" ಎಂದರು.
ಇದನ್ನೂ ಓದಿ: 25 ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗೆ ಟಿಕೆಟ್ ನೀಡಲು ಬ್ರಾಹ್ಮಣ ಮಹಾಸಭಾ ಆಗ್ರಹ
ಪತ್ರಿಕಾಗೋಷ್ಠಿಯಲ್ಲಿ ಮತ್ತೊಬ್ಬ ವಿಪ್ರ ಮುಖಂಡ ಹಾಗೂ ಸಮಾಜ ಸೇವಕ ರಘುರಾಮ್ ವಾಜಪೇಯಿ ಮಾತನಾಡಿ, "ಕಳೆದ ಬಾರಿ ಚುನಾವಣೆಯಲ್ಲಿ ನಾವೆಲ್ಲ ಮುಖಂಡರು ಸೇರಿ ರಾಜೀವ್ ಅವರನ್ನು ಚುನಾವಣೆಗೆ ನಿಲ್ಲುವುದು ಬೇಡ ಎಂದು ಹೇಳಿ ಸಮುದಾಯದವರು ಒಟ್ಟಾಗಿ ಸೇರಿ ರಾಮದಾಸ್ ಅವರನ್ನು ಗೆಲ್ಲಿಸಿದ್ದೆವು. ಆದರೆ ಗೆದ್ದ ನಂತರ ನಮ್ಮ ಸಮುದಾಯದವರಿಗೆ ಸರಿಯಾಗಿ ರಾಮದಾಸ್ ಸ್ಪಂದಿಸಲಿಲ್ಲ. ಆದ್ದರಿಂದ ನಾವೆಲ್ಲ ಒಟ್ಟಾಗಿ ಸೇರಿ ಈ ಬಾರಿ ರಾಮದಾಸ್ ಅವರಿಗೆ ಟಿಕೆಟ್ ನೀಡುವುದು ಬೇಡ. ಅವರನ್ನು ಬಿಟ್ಟು ಬೇರೆ ವಿಪ್ರರಿಗೆ ನೀಡಿ ಎಂದು ಹೈಕಮಾಂಡ್ಗೆ ಒತ್ತಾಯಿಸುತ್ತೇವೆ" ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಪ್ರ ಮುಖಂಡರಾದ ಇಳಯ್ ಆಳ್ವ ಸ್ವಾಮೀಜಿ, ಡಾ.ಲಕ್ಷ್ಮಿ ನಟರಾಜ್ ಜೋಶಿ ಹಾಗೂ ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರಿದ್ದರು.
ಇದನ್ನೂ ಓದಿ: ಸಿ.ಟಿ. ರವಿ ವಾದ, ಹಸಿಹಸಿ ಸುಳ್ಳು ಹೇಳುವ ಅವರ ಹುಟ್ಟುಗುಣಕ್ಕೆ ತಕ್ಕ ಹಾಗಿದೆ: ಸಿದ್ದರಾಮಯ್ಯ ಗರಂ