ಮೈಸೂರು: ಹೊಸ ಆಲೋಚನೆಗಳು ಹೊರ ಹೊಮ್ಮಬೇಕೆಂದರೆ ಅಲ್ಲಿ ವೈಚಾರಿಕ ಸಂಘರ್ಷಗಳಿರಬೇಕು. ಎಲ್ಲಿ ವೈಚಾರಿಕ ಸಂಘರ್ಷಗಳಿಗೆ ಜಾಗವಿಲ್ಲವೋ ಅಲ್ಲಿ ಹೊಸ ವಿಚಾರಗಳಿಗೂ ಜಾಗವಿರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ರಂಗಾಯಣ ಕಲಾಮಂದಿರದಲ್ಲಿ ಶನಿವಾರ ನಡೆದ ಬಹುರೂಪಿ ರಂಗೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ವಿಚಾರವನ್ನು ನಿಷ್ಕರ್ಷಿಸಿ ನೋಡಿದಾಗ ಅದರ ಒಳಗು, ಒಳ ಉದ್ದೇಶಗಳು ಅರ್ಥವಾಗುತ್ತವೆ. ಹೊಸ ಚಿಂತನೆ, ಹೊಸ ಆಯಾಮ ಎಲ್ಲರನ್ನೊಳಗೊಂಡ ಭವ್ಯ ಭವಿಷ್ಯ ನಮ್ಮ ದೇಶ, ನಮ್ಮ ನಾಡಿಗೆ ಹೊಸ ಜನಾಂಗಕ್ಕೆ ಬೇಕು. ಅಂತಹ ವಿಚಾರಗಳನ್ನು ತಲುಪಿಸುವ ಮುಖ್ಯ ವಾಹಿನಿ ರಂಗಾಯಣ ಆಗಬೇಕು ಎಂದರು.
ಈಗಾಗಲೇ ಸಂಘರ್ಷಗಳಿಂದ ಪಾಠ ಕಲಿತಿದ್ದೇವೆ. ಆ ಪಾಠಗಳು ಹೊಸ ಪೀಳಿಗೆಗೆ ವೈಚಾರಿಕತೆಯನ್ನು ನಮ್ಮ ಬದುಕಿಗೆ ಹತ್ತಿರವಾದುದನ್ನು ತೆಗೆದುಕೊಂಡು ಹೋಗುವ ಕೆಲಸವನ್ನು ರಂಗಾಯಣ ಮಾಡಲಿ. ಪ್ರಾಚೀನ ಕಾಲದಲ್ಲಿ ಯಾವ ಭಾವನೆಗಳನ್ನು ಶಬ್ದಗಳ ಮೂಲಕ ತಿಳಿಸಲಾಗುತ್ತಿರಲಿಲ್ಲವೋ, ಯಾವ ಭಾವನೆಗಳನ್ನು ಸಾಹಿತ್ಯದ ಮೂಲಕ ತಿಳಿಸಲಾಗುತ್ತಿರಲಿಲ್ಲವೋ ಅವುಗಳನ್ನು ಅಭಿನಯದ ಮುಖಾಂತರ ಅಭಿವ್ಯಕ್ತಿಸಲಾಗುತಿತ್ತು. ಪ್ರತಿ ಪಾತ್ರಕ್ಕೂ ತನ್ನದೇ ಆದ ಹಾವ ಭಾವಗಳಿರುತಿದ್ದವು. ನಮ್ಮ ಅಭಿವ್ಯಕ್ತಿ ಸಹಜವಾಗಿರಬೇಕೇ ವಿನಃ ನಾಟಕೀಯವಾಗಿರಬಾರದು. ಸಾಂಸ್ಕೃತಿಕ ರಾಜಧಾನಿ ಮೈಸೂರು ಎಂಬ ಅನ್ವರ್ಥದಂತೆ ರಂಗಾಯಣವೂ ಬೆಳೆಯಲಿ ಎಂದು ಸಿಎಂ ಆಶಿಸಿದರು.
ಇದನ್ನೂ ಓದಿ: ಬಸವಣ್ಣನವರ ಆಶಯದಂತೆ ಸಮಾಜ ನಿರ್ಮಾಣ ಆಗಬೇಕಿದೆ : ಸಿಎಂ ಬಸವರಾಜ ಬೊಮ್ಮಾಯಿ
ಚಿತ್ರನಟ ರಮೇಶ್ ಅರವಿಂದ್ ಮಾತನಾಡಿ, ಭಾರತೀಯತೆಯ ಅದ್ಭುತ ಕಲ್ಪನೆಯಲ್ಲಿ ಮೂಡಿಬಂದಿರುವ ಬಹುರೂಪಿ ರಂಗೋತ್ಸವ ಯಶಸ್ವಿಯಾಗಲಿ. ರಂಗಾಯಣ ಎಲ್ಲಾ ಸಾಧ್ಯತೆಗಳನ್ನು ಪರಿಚಯಿಸುವುದರೊಂದಿಗೆ ನಟನೆಯ ವಿವಿಧ ನಿಯಮಗಳನ್ನು ಕಲಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಪೊಲೀಸ್ ಆಯುಕ್ತ ರಮೇಶ್, ಜಿ.ಪಂ.ಸಿಇಒ ಪೂರ್ಣಿಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದನ್ನೂ ಓದಿ: ಗಂಗರ ಇತಿಹಾಸ ಅರಿಯಲು ಸಂಶೋಧನಾ ಪ್ರಾಧಿಕಾರ ರಚನೆ: ಸಿಎಂ ಬೊಮ್ಮಾಯಿ