ಮೈಸೂರು: ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಯಾವುದೇ ಅಡಚಣೆ ಮಾಡದೇ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಚಿವ ಜಿ.ಟಿ.ದೇವೇಗೌಡರು ಹೇಳಿಕೆ ನೀಡಿದ್ದಾರೆ.
ಇಂದು ಕೆಂಪೇಗೌಡ ಜಯಂತಿ ಆಚರಣೆಗೆ ನಗರಕ್ಕೆ ಆಗಮಿಸಿದ್ದ ವೇಳೆ ಈ ಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಳ್ಳಿ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ತುಂಬಾ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಅವರು ತೊಂದರೆ ಮಾಡಬಾರದು. ಬದಲಾಗಿ ಸಹಕಾರ ನೀಡಬೇಕು ಎಂದರು.
ವಾಲ್ಮೀಕಿ ಸ್ವಾಮೀಜಿ ಅವರು ಸಿಎಂ ವಿರುದ್ಧ ಬಳಸಿರುವ ಪದಗಳ ಬಗ್ಗೆ ಪ್ರತಿಕ್ರಿಯಿಸಿ, ಸ್ವಾಮೀಜಿ ಅವರಿಗೆ ಸಿಎಂ ಅವರನ್ನು ಕರೆದು ಮಾತನಾಡಲು ಆಗಿಲ್ಲ. ಸ್ವಲ್ಪ ಅಸಮಾಧಾನ ಇರುವುದು ನಿಜ. ಈ ಸಮುದಾಯಕ್ಕೆ ದೇವೇಗೌಡರು ಮೀಸಲಾತಿ ಹಾಗೂ ಮಠ ಕಟ್ಟಿಸಲು ಸಹಾಯ ಮಾಡಿದ್ದಾರೆ. ಸ್ವಾಮೀಜಿ ನಡೆದು ಸುಸ್ತಾಗಿ ಬಂದಿದ್ದರಿಂದ ಏನೇನೋ ಮಾತನಾಡಿದ್ದಾರೆ. ಯಾವುದೇ ತೊಂದರೆಯಿಲ್ಲ. ಮೈಸೂರು ಜಿಲ್ಲೆ ಹಾಗೂ ನಗರಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಇನ್ನು 15 ದಿನ ಕಾದು ನೋಡಿ ಏನೇನ್ ಮಾಡುತ್ತೇನೆ ಎಂದು ಉತ್ತರಿಸಿದರು.
ಪ್ರತಿಭಟನೆ ಮಾಡಬಾರದಿತ್ತು:
ಬಿಜೆಪಿ ಅಥವಾ ಯಾವುದೇ ಪಕ್ಷದವರಾಗಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕ್ಷೇತ್ರದ ಕೆಲಸಗಳ ಬಗ್ಗೆ ಮಾತನಾಡಬೇಕಿತ್ತು. ಗ್ರಾಮ ವಾಸ್ತವ್ಯ ಮಾಡುವ ವೇಳೆ ಪ್ರತಿಭಟನೆ ಮಾಡಬಾರದಿತ್ತು. ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಮಾತನಾಡಬೇಕಿತ್ತು ಎಂದರು.
ಇನ್ನೂ ಸಿಎಂ ಪ್ರತಿಭಟನಾಕಾರರ ಮೇಲೆ ಗರಂ ಆಗಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಪ್ರತಿಭಟನಾಕಾರರ ಮೇಲೆ ಗರಂ ಆಗಿದ್ದು, ನನಗೆ ಗೊತ್ತಿಲ್ಲ. ನಾನು ಆ ವಿಚಾರವಾಗಿ ನೋಡಿಲ್ಲ ಎಂದರು.
ಕೆಂಪೇಗೌಡರ ಕೊಡುಗೆ ಅಪಾರ :
ಕೆಂಪೇಗೌಡರ ಬಗ್ಗೆ ಇನ್ನಷ್ಟು ಸಂಶೋಧನೆಗಳು ಆಗಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ಕೆಂಪೇಗೌಡ ಪ್ರಾಧಿಕಾರ ರಚಿಸುವ ಬಗ್ಗೆ ಬೇಡಿಕೆಯನ್ನ ಇಟ್ಟಿದ್ದೆವು . ಅದನ್ನ ಮನ್ನಿಸಿ ಪ್ರಾಧಿಕಾರ ಮಾಡಿದ್ದು, ಪ್ರಾಧಿಕಾರ ಚೆನ್ನಾಗಿ ಕೆಲಸ ಮಾಡ್ತಿದೆ. ಸಿಎಂ ಕೂಡ ಹೆಚ್ಚಿನ ಅಭಿವೃದ್ಧಿ ಮಾಡುವ ಸಲುವಾಗಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ ಎಂದು ತಿಳಿಸಿದರು.