ಮೈಸೂರು: ನೂತನ ಸರ್ಕಾರ ಕಳಂಕ ರಹಿತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ ಎಂದು ಪೇಜಾವರದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.
ಇಂದು ಮೈಸೂರಿನಲ್ಲಿ ಎರಡು ತಿಂಗಳ ಕಾಲ ಚಾತುರ್ಮಾಸ ವ್ರತ ಕೈಗೊಳ್ಳಲು ಆಗಮಿಸಿರುವ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು, ಕೃಷ್ಣ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ವೀರಶೈವ ಲಿಂಗಾಯತ ಎರಡು ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಹೇಳಿಕೆಯನ್ನು ಸೋದರ ಭಾವನೆಯಿಂದ ಹೇಳಿದ್ದೇನೆ ವಿನಾ ಬೇರೆ ಉದ್ದೇಶವಿಲ್ಲ ಎಂದರು.
ವೀರಶೈವ-ಲಿಂಗಾಯತ ಇಬ್ಬರೂ ಹಿಂದೂಗಳೇ. ಈ ಬಗ್ಗೆ ಮುಕ್ತ ವೇದಿಕೆಯಲ್ಲಿ ಇದನ್ನು ವಿರೋಧಿಸುವ ಸಾಣೇಹಳ್ಳಿ ಸ್ವಾಮಿಗಳು, ಜಾಮದಾರ್ ಹಾಗೂ ಎಂ.ಬಿ.ಪಾಟೀಲ್ ಅವರು ನಮ್ಮೊಂದಿಗೆ ಸಂವಾದಕ್ಕೆ ಬರಲಿ. ನಾನು ಸಿದ್ಧನಿದ್ದೇನೆ ಎಂದು ಆಹ್ವಾನ ನೀಡಿದರು.
ಭಾರತದಲ್ಲಿರುವ ಬುದ್ಧ, ಜೈನ, ಸಿಖ್ ಧರ್ಮಗಳು ಸಹ ಹಿಂದೂ ಧರ್ಮಗಳೇ. ಇಂದಿನ ಜಾತಿ ಹಾಗೂ ಧರ್ಮ ಬೇಧಕ್ಕೆ ರಾಜಕಾರಣಿಗಳೇ ಕಾರಣ. ನಾನು ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಲು ಪ್ರಯತ್ನ ಮುಂದುವರೆಸುತ್ತೇನೆ ಎಂದರು.