ಮೈಸೂರು: ಒಬ್ಬರು ಇಟಲಿ, ರೋಮ್ ಸುತ್ತುತ್ತಾರೆ. ನಮ್ಮ ನಾಯಕರು ದೇಶ ಸುತ್ತುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವ್ಯಂಗ್ಯವಾಡಿದರು. ನಗರದ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಗುರುವಾರ ನಡೆದ ಬಿಜೆಪಿ ಮೈಸೂರು ನಗರ ಹಾಗೂ ಗ್ರಾಮಾಂತರ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಚುನಾವಣೆ ವೇಳೆ ಕರ್ನಾಟಕಕ್ಕೆ ಬರುತ್ತಾರೆಂದು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಸಂತೋಷ್, ಮೋದಿ ದೇಶದ ಪ್ರಧಾನಿಯೂ ಹೌದು, ಬಿಜೆಪಿ ಪಕ್ಷದ ನಾಯಕರು ಹೌದು ಎಂದು ಹೇಳಿದರು.
ಇಡೀ ರಾಜ್ಯವನ್ನು ಒಂದು ಕುಟುಂಬದವರು ಹಂಚಿಕೊಂಡಿದ್ದು, ಯಾರಿಗೆ ಬೇಕಾದರೂ ಟಿಕೆಟ್ ಘೋಷಿಸುವ ಅಧಿಕಾರ ಹೊಂದಿದ್ದಾರೆ ಎಂದು ಜೆಡಿಎಸ್ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದರು. ವಿಧಾನಸಭಾ ಚುನಾವಣೆಗೆ ಜೆಡಿಎಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಈ ಪಕ್ಷದಲ್ಲಿ ಚುನಾವಣಾ ಸಮಿತಿ ಇಲ್ಲ. ಕಾರ್ಯಕರ್ತರು ಇಲ್ಲ. ಒಬ್ಬರು ಕುಳಿತು ಸಹಿ ಮಾಡಿದರೆ ಮುಗಿಯಿತು. ಆ ಪಟ್ಟಿ ಯಾವಾಗ ಬೇಕಾದರೂ ಬದಲಾಗಬಹುದು. ಈ ವಿಶೇಷ ಪಕ್ಷವನ್ನು ಬಿಜೆಪಿಯೊಂದಿಗೆ ಹೋಲಿಕೆ ಮಾಡುವುದಿಲ್ಲ ಎಂದು ಲೇವಡಿ ಮಾಡಿದರು. ಜೆಡಿಎಸ್‌ನಂತೆ ಕಾಂಗ್ರೆಸ್‌ನಲ್ಲಿಯೂ ಸಹ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೊಂದಾಣಿಕೆಯಿಂದ ಅಭ್ಯರ್ಥಿಗಳ ಪಟ್ಟಿ ಘೋಷಿಸಲಿದ್ದಾರೆ ಎನ್ನಲಾಗಿತ್ತು. ಈಗ ಮಾರ್ಚ್ ತಿಂಗಳಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದರು.
ಬಿಜೆಪಿ ಸರಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಆದರೆ ಲೋಕಾಯುಕ್ತ, ಎಸಿಬಿ, ಹೈಕೋರ್ಟ್ ಎಲ್ಲಾದರೂ ಒಂದು ಕಡೆ ದೂರು ಕೊಟ್ಟರಾ? ಯಾಕೆ ಕೊಡಲಿಲ್ಲ. ಹಾಗಾಗಿ ಸಿದ್ದರಾಮಯ್ಯ ಅವರ ಅಪಾದನೆಗಳಲ್ಲಿ ಸತ್ಯ ಇಲ್ಲ ಎಂಬುದು ಜನರಿಗೆ ಮನವರಿಕೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಗಲೆಲ್ಲ ಟಿಪ್ಪು ಭಜನೆ ಮಾಡುತ್ತಾರೆ. ಅವರಿಗೆ ಪ್ರಿಯರಾದವರ ಭಜನೆ ಮಾಡಲಿ, ನಾವೇನು ಪ್ರಶ್ನಿಸುವುದಿಲ್ಲ. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್, ಮದಕರಿ ನಾಯಕ, ಒನಕೆ ಒಬವ್ವ ಮುಂತಾದವರನ್ನು ಗೌರವಿಸಬೇಕಿತ್ತು. ಟಿಪ್ಪುವಿನಂತೆಯೇ ದೇವನಹಳ್ಳಿಯಲ್ಲಿಯೇ ಹುಟ್ಟಿದ ಕೆಂಪೇಗೌಡರ ಗೌರವ ಕೊಡಲು ಲಿಂಗಾಯತರೇ ಬರಬೇಕಾಯಿತು.
ಈವರೆಗಿನ ಯಾವ ಸಮೀಕ್ಷೆಯಲ್ಲಿಯೂ ಬಿಜೆಪಿ ಹಿಂದೆ ಇದೇ ಎಂದು ಹೇಳಿಲ್ಲ. ಇದೇ ಆತ್ಮವಿಶ್ವಾಸದೊಂದಿಗೆ ವಿಜಯದ ಕಡೆಗೆ, ಗೆಲುವಿನ ಕಡೆಗೆ ಕೊಂಡೊಯ್ಯಲು ದೃಢವಾದ ಹೆಜ್ಜೆ ಇಟ್ಟಿದ್ದೇವೆ. ನಮ್ಮದು ಪೂರ್ಣ ಬಹುಮತ ಬಂದಿದ್ದರೆ ಬೇಕಾದವರಿಗೆ ಅಧಿಕಾರ ಕೊಡಬಹುದಿತ್ತು. ಆ ಕಾರಣಕ್ಕಾಗಿಯೇ ರಾಮದಾಸ್ ನಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಆಕಾಂಕ್ಷಿತರು ಟಿಕೆಟ್‌ಗಾಗಿ ಎಲ್ಲಿಗೆ ಬೇಕಾದರೂ ಹೋಗಲಿ, ಯಾರ ಮನೆ ಬಾಗಿಲಿಗಾದರೂ ಹೋಗಲಿ. ಯಾರ ಮೇಲೂ ಕೋಪಗೊಳ್ಳದೇ ಚಿಹ್ನೆ ನೋಡಿ ಮತ ಕೊಡಬೇಕು. ಕೆ.ಆರ್.ಕ್ಷೇತ್ರ ಮತ್ತು ಚಾಮರಾಜ ಕ್ಷೇತ್ರದಲ್ಲಿ ಯಾರಾದರೂ ಟಿಕೆಟ್ ಕೇಳಲಿ, ಯಾವ ನಂಟಿಗೂ ಒಳಗಾಗದೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು. ಸ್ವತಂತ್ರ ಸರಕಾರ ರಚನೆಗೆ ಮೈಸೂರು ಜಿಲ್ಲೆಯ ಕೊಡುಗೆ ಹೆಚ್ಚಿರಬೇಕು ಎಂದು ಹೇಳಿದರು.
ಇದನ್ನೂ ಓದಿ: ಬಿಎಸ್ವೈಗೆ ಸ್ಟ್ರಾಟಜಿ ಹೇಳಿಕೊಟ್ಟಿದ್ದು ನಾನೇ: ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ್ ಪ್ರಸನ್ನಕುಮಾರ್