ಮೈಸೂರು: ದಶಪಥ ಮೈಸೂರು- ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್ ವೇ ಅವೈಜ್ಞಾನಿಕವಾಗಿದ್ದು, ಇದು ಸಾವಿನ ಹೆದ್ದಾರಿಯಾಗಿದೆ ಎಂಬ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ರೇಸಿಂಗ್ ಟ್ರ್ಯಾಕ್ ಅಲ್ಲ, ಬೆಂಗಳೂರು- ಮೈಸೂರು ನಡುವೆ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುವ ಎಕ್ಸ್ಪ್ರೆಸ್ ಹೈವೇ. ಇದು ರೇಸಿಂಗ್ ಮಾಡೋಕೆ ಇರುವ ರಸ್ತೆಗಳಲ್ಲ, ಅದಕ್ಕಾಗಿ ಬೇರೆ ರಸ್ತೆಗಳಿವೆ ಎಂದು ತಿರುಗೇಟು ನೀಡಿದ್ದಾರೆ.
ಹೈವೇಯಲ್ಲಿ ಪ್ರತಿದಿನ ಅಪಘಾತಗಳಾಗುತ್ತಿವೆ. ಇದಕ್ಕೆ ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದೇ ಕಾರಣ ಎಂದು ಹೇಳಿದರೆ ಅಥವಾ ತೋರಿಸಿದರೆ ಎಂಜಿನಿಯರ್ಗಳನ್ನು ಕರೆದುಕೊಂಡು ಬಂದು ಸರಿಮಾಡುತ್ತೇನೆ. ಅದನ್ನು ಬಿಟ್ಟು ಬರೀ ಹೆದ್ದಾರಿ ಅವೈಜ್ಞಾನಿಕ ಎಂದು ಹೇಳಿದ್ರೆ ಒಪ್ಪಲು ನಾವು ಸಿದ್ದವಿಲ್ಲ. ಹೆದ್ದಾರಿಯಲ್ಲಿ ಅಪಘಾತವಾಗಲು ಚಾಲಕರ ಬೇಜವಾಬ್ದಾರಿಯುತ ಚಾಲನೆಯೇ ಕಾರಣ ಎಂದರು.
ಅವೈಜ್ಞಾನಿಕ ಕಾಮಗಾರಿ ನಡೆದಿಲ್ಲ: ಹೆದ್ದಾರಿಯಲ್ಲಿ ಯಾವುದೇ ಅವೈಜ್ಞಾನಿಕ ಕಾಮಗಾರಿಗಳು ನಡೆದಿಲ್ಲ. ಹೆದ್ದಾರಿಯಲ್ಲಿ ಗರಿಷ್ಠ ವೇಗ 120 ಕಿಲೋಮೀಟರ್ ಆಗಿದೆ. ಸಣ್ಣಪುಟ್ಟ ಕಾರುಗಳಲ್ಲಿ ವೇಗವಾಗಿ ಹೋದರೆ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿದರು. ಯಾರಾದರೂ ಇಂಜಿನಿಯರ್ಗಳು ಈ ರಸ್ತೆ ಪ್ರಾಬ್ಲಮ್ ಇದೆ ಎಂದು ಹೇಳಲಿ. ಖಂಡಿತಾ ಅದನ್ನು ಸರಿಮಾಡುತ್ತೇವೆ. ಕೆಲವು ಅವಶ್ಯಕ ಸೌಲಭ್ಯ ಹಾಗೂ ಸಣ್ಣಪುಟ್ಟ ಕಾಮಗಾರಿಗಳು ನಡೆಯಬೇಕಿವೆ. ಶೀಘ್ರವೇ ಆ ಕೆಲಸ ಕೈಗೆತ್ತಿಕೊಳ್ಳುತ್ತೇವೆ. ಮಂಡ್ಯದಿಂದ ಮೈಸೂರಿನವರೆಗಿನ ಟೋಲ್ ಸಂಗ್ರಹ ಕಾರ್ಯ ಶೀಘ್ರ ಆರಂಭವಾಗಲಿದೆ. ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಎಕ್ಸ್ಪ್ರೆಸ್ ಹೈವೇಯನ್ನು ವೈಜ್ಞಾನಿಕವಾಗಿಯೇ ನಿರ್ಮಾಣ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ರೈಲ್ವೆ ವಿಭಾಗದ ಅಧಿಕಾರಿಗಳ ಸಭೆ: ಮೈಸೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ ಹಿನ್ನೆಲೆಯಲ್ಲಿ ಇಂದು ಸಂಸದ ಪ್ರತಾಪ್ ಸಿಂಹ ರೈಲ್ವೆ ವಿಭಾಗದ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನರೇಂದ್ರ ಮೋದಿಯವರು ಕಳೆದ ವರ್ಷ ಯೋಗ ದಿನಾಚರಣೆಗೆ ಮೈಸೂರಿಗೆ ಬಂದಿದ್ದಾಗ, ಮೈಸೂರು ರೈಲ್ವೆ ನಿಲ್ದಾಣದ ವಿಸ್ತರಣೆಗೆ ಭೂಮಿ ಪೂಜೆ ಮಾಡಿ, 344 ಕೋಟಿ ರೂ ಮಂಜೂರು ಮಾಡಿದ್ದರು. ಮೂರು ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದಕ್ಕೆ ಡಿಪಿಆರ್ ಸಿದ್ದಪಡಿಸಲಾಗಿದೆ ಎಂದ ಪ್ರತಾಪ್ ಸಿಂಹ, ಆಗಸ್ಟ್ 15ಕ್ಕೆ ಅಶೋಕಪುರಂ ರೈಲ್ವೆ ನಿಲ್ದಾಣ ಲೋಕಾರ್ಪಣೆ ಆಗಲಿದೆ. ಇದು ಮೈಸೂರಿನ ಎರಡನೇ ರೈಲ್ವೆ ನಿಲ್ದಾಣ ಆಗಲಿದ್ದು, ಕೆಲವು ರೈಲುಗಳು ಇಲ್ಲಿಂದ ಹೊರಡಲಿವೆ ಎಂದರು.
1870ರಲ್ಲಿ ಮೈಸೂರು ಅರಸರಾಗಿದ್ದ ಚಾಮರಾಜ ಒಡೆಯರ್ ಮೈಸೂರಿಗೆ ರೈಲ್ವೆ ಸೇವೆ ಆರಂಭಿಸಿದರು. ಹೀಗಾಗಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರು ಇಡಲಾಗುವುದು. ಚಾಮರಾಜ ಒಡೆಯರ್ ಪ್ರತಿಮೆಯನ್ನೂ ಸಹ ಸ್ಥಾಪಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇದನ್ನೂಓದಿ:ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ʼಕಾಸಿಗಾಗಿ ಪೋಸ್ಟಿಂಗ್' ಎಂದು ಹೆಚ್ಡಿಕೆ ಟೀಕೆ.. ರಾಮಲಿಂಗಾರೆಡ್ಡಿ ತಿರುಗೇಟು!