ಮೈಸೂರು: ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಇಂದಿನಿಂದ ಅಧಿಕೃತವಾಗಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿರ್ಬಂಧ ಮಾಡಲಾಗಿದೆ. ನಗರದ ಟ್ರಾಫಿಕ್ ಪೊಲೀಸರು ಮೈಕಿನಲ್ಲಿ ಸವಾರರಿಗೆ ನಿಯಮವನ್ನು ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದಂತೆ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಧಿಕೃತವಾಗಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಪ್ರವೇಶ ಹಾಗೂ ಸಂಚಾರದ ಮೇಲೆ ಸಂಪೂರ್ಣ ನಿರ್ಬಂಧ ಹೇರಿದ್ದು, ಇದರಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ಮಂಗಳವಾರ ಬೆಳಗ್ಗೆಯಿಂದಲೇ ಪೊಲೀಸರಿಂದ ಗಸ್ತು ಆರಂಭವಾಗಿದೆ. ಮುಖ್ಯ ಹೆದ್ದಾರಿಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಓಡಾಡದಂತೆ ಪೊಲೀಸರು ಕ್ರಮ ವಹಿಸಿದ್ದಾರೆ.
ಮೈಕ್ ಮೂಲಕ ಸವಾರರಿಗೆ ಮನವಿ ಮಾಡಿದ ಪೊಲೀಸರು: ಈ ಹೆದ್ದಾರಿಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ, ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಹತ್ತಿರ ಪೊಲೀಸರು ಮೈಕ್ ಮೂಲಕ ಸವಾರರಿಗೆ ಅರಿವು ಮೂಡಿಸಿದರು. ''ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಎಕ್ಸ್‌ಪ್ರೆಸ್ ಹೈವೇಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ದಯವಿಟ್ಟು ವಾಹನ ಸವಾರರು ಸರ್ವೀಸ್ ರಸ್ತೆಯಲ್ಲಿ ಪ್ರಯಾಣ ಮಾಡಬೇಕು ಎಂದು ತಿಳಿಹೇಳಿದರು. ಜೊತೆಗೆ ಸರ್ವಿಸ್ ರಸ್ತೆ ಮತ್ತು ಮುಖ್ಯ ರಸ್ತೆ ಮಧ್ಯ ಹಾಕಿದ್ದ ಬ್ಯಾರಿಕೇಡ್ಗಳನ್ನು ಪೊಲೀಸರು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಿಳಿಯದೇ ಹೆದ್ದಾರಿಗೆ ಬರುತ್ತಿದ್ದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ತಡೆದು, ಅವುಗಳನ್ನು ಪಕ್ಕದ ಸರ್ವೀಸ್ ರಸ್ತೆಗೆ ಕಳುಹಿಸುತ್ತಿದ್ದ ದೃಶ್ಯಗಳು ಕೂಡ ಕಂಡುಬಂದಿವೆ.
ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ಬೆಂಬಲ- ಚೆಲುವನಾರಾಯಣಸ್ವಾಮಿ: ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇಯಲ್ಲಿ 2ನೇ ಹಂತದ ಟೋಲ್ ಸಂಗ್ರಹವು ಕೇಂದ್ರ ಸರ್ಕಾರದ ಉದ್ಧಟತನವಾಗಿದೆ. ಜನರಿಗೆ ಟೋಲ್ ಕಟ್ಟದಂತೆ ಕರೆ ನೀಡಲಾಗಿದೆ. ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನೇರವಾಗಿ ಪ್ರತಿಭಟನೆಗೆ ಹೋಗುವುದಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವನಾರಾಯಣಸ್ವಾಮಿ ಹೇಳಿದ್ದರು. ಮೈಸೂರಿನಲ್ಲಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ''ಬೆಂಗಳೂರು- ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇಯಲ್ಲಿ 2ನೇ ಹಂತದ ಟೋಲ್ ಸಂಗ್ರಹ ಕೇಂದ್ರ ಸರ್ಕಾರದ ಉದ್ಧಟತನವಾಗಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ'' ಎಂದು ಆರೋಪಿಸಿದ್ದರು.
ಇದನ್ನೂ ಓದಿ: ರಾಜ್ಯ ಸ್ಟಾರ್ಟ್ ಅಪ್ ಸಂಸ್ಥೆಗಳ ಸಮಸ್ಯೆ, ಬೇಡಿಕೆ ಅರಿಯಲು ಸರ್ವೆಗೆ ಮುಂದಾದ ಐಟಿಬಿಟಿ...ಪ್ರಿಯಾಂಕ್ ಖರ್ಗೆಯಿಂದ ಟ್ವೀಟ್