ಮೈಸೂರು: ಹಿಂದಿನ ಕಾಲದ ಮಹಿಳೆಯರು ತಮ್ಮ ದುಃಖ, ನೋವುಗಳನ್ನು ಜಾನಪದದ ಮೂಲಕ ಹೇಳಿಕೊಳ್ಳುತ್ತಿದ್ದರು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
ರಂಗಾಯಣ ವತಿಯಿಂದ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ರಂಗಾಯಣದ ಕಿಂದರಿಜೋಗಿ ಆವರಣದಲ್ಲಿ ನಡೆದ ಬಹುರೂಪಿ ಜಾನಪದೋತ್ಸವಕ್ಕೆ ಜೋಗತಿಗೆ ಹುಡಿ ಹಾಗೂ ಗೊರವನಿಗೆ ಜೋಳಿಗೆ ತುಂಬುವ ಮೂಲಕ ಬುಧವಾರ ಚಾಲನೆ ನೀಡಿದರು. ಜಾನಪದ, ರಂಗ ಕಲೆಗೆ ಒತ್ತು ನೀಡಿ. ಸಿನಿಮಾ, ಟಿವಿ, ಮೊಬೈಲ್ ಬಳಕೆಯಿಂದಾಗಿ ರಂಗಭೂಮಿ ಮತ್ತು ಜಾನಪದ ಕಲೆ ನಶಿಸುತ್ತಿವೆ. ನಮ್ಮ ನಡುವೆ ಇರುವ ಎಲ್ಲಾ ಕಲೆಗಳಿಗೂ ಜಾನಪದ ಕಲೆ ಮೂಲ ಬೇರಾಗಿದೆ. ಈ ಹಿಂದೆ ಗೃಹಣಿಯರು ತಮ್ಮ ಮನದಾಳದ ನೋವನ್ನು ಹಾಡುಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ರಾಗಿ ಬೀಸುವಾಗ, ಪದಗಳನ್ನು ಕಟ್ಟಿ ಹಾಡುತ್ತಿದ್ದರು. ಆದರೆ ಇಂದು ಆ ಕಲೆಯನ್ನು ಧಾರಾವಾಹಿ ಮತ್ತು ಮೊಬೈಲ್‌ಗಳು ನುಂಗಿಹಾಕಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಚನ್ನಪ್ಪ, ರಂಗೋತ್ಸವ ಸಂಚಾಲಕಿ ಗೀತಾ ಮೋಂಟಡ್ಕ, ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಸಂಚಾಲಕ ಹುಲುಗಪ್ಪ ಕಟ್ಟಿಮನಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಗೊರಕರ ಕುಣಿತ ಹಾಗೂ ಜೋಗಿತ ಕುಣಿತ ಪ್ರೇಕ್ಷಕರ ಮನಸೆಳೆಯಿತು.