ಮೈಸೂರು: ಅರಮನೆಯಲ್ಲಿ ಆಯುಧಪೂಜೆ ಸಂಭ್ರಮ ಕಳೆಗಟ್ಟಿದೆ. ಇಂದು ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭಗೊಂಡಿದೆ. ಇಡೀ ದಿನ ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ.
ಬೆಳಗ್ಗೆ 7:45ಕ್ಕೆ ರಾಜರ ಆಯುಧಗಳನ್ನು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿಂದ ಅರಮನೆ ಕಲ್ಯಾಣ ಮಂಟಪಕ್ಕೆ ತರಲಾಗುತ್ತದೆ. 11:02 ರಿಂದ 11:22ರಲ್ಲಿ ಸಲ್ಲುವ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದ ನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ ಹಾಗು ಪಟ್ಟದ ಹಸುಗಳಿಗೆ ಶಾಸ್ತ್ರೋಕ್ತವಾಗಿ ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸುವರು.
ಅಕ್ಟೋಬರ್ 15ರಂದು (ನಾಳೆ) ವಿಜಯದಶಮಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಇತಿಹಾಸಪ್ರಸಿದ್ಧ ಜಟ್ಟಿ ಕಾಳಗಕ್ಕೆ ಅನುಮತಿ ನೀಡಲಾಗಿಲ್ಲ.
ಈ ಬಾರಿ ಅರಮನೆ ಆವರಣಕ್ಕೆ ಮಾತ್ರ ಮೆರವಣಿಗೆ ಸೀಮಿತವಾಗಿರಲಿದೆ. ಹೀಗಾಗಿ ಸಂಜೆ 4:36ರಿಂದ 4:46ರ ನಡುವಿನ ಶುಭ ಮುಹೂರ್ತದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದಸರಾ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಂಜೆ 5ರಿಂದ 5:30ರ ಶುಭ ಮುಹೂರ್ತದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಪ್ಪಾರ್ಚನೆ ಸಲ್ಲಿಸಲಿದ್ದು ವಿಶ್ವಪ್ರಸಿದ್ಧ ಜಂಬೂಸವಾರಿ ನಡೆಯಲಿದೆ.
ಇದನ್ನೂ ಓದಿ: 12 ಮಂದಿ ಸಾಧಕರಿಗೆ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ