ಮೈಸೂರು: ಬೆಳಗಿನ ಜಾವ ಕುರಿ ಕದ್ದು ಆಟೋದಲ್ಲಿ ಹೋಗುತ್ತಿದ್ದ ಕುರಿ ಕಳ್ಳರನ್ನು, ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಈ ವೇಳೆ ಓರ್ವ ಕುರಿ ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ರಿಂಗ್ ರಸ್ತೆಯ ಹೊರವಲಯದ ಮಂಟಿ ಬಡಾವಣೆಯಲ್ಲಿ ಬೆಳಗಿನ ಜಾವ 4 ಜನ ಆಟೋದಲ್ಲಿ ಬಂದು, ಕುರಿಯನ್ನು ಕದ್ದು ಆಟೋದಲ್ಲಿ ಹೋಗುತ್ತಿರುವಾಗ ಹಿಂಬಾಲಿಸಿದ ಸಾರ್ವಜನಿಕರು ಆಟೋವನ್ನು ಹಿಡಿದು 3 ಜನ ಕುರಿಕಳ್ಳರಿಗೆ ಥಳಿಸಿದ್ದಾರೆ. ಒಬ್ಬ ಕುರಿಕಳ್ಳ ಪರಾರಿಯಾಗಿದ್ದು, ಸಾರ್ವಜನಿಕರ ಥಳಿತಕ್ಕೆ ಜಹೀರ್ ಎಂಬ ವ್ಯಕ್ತಿ ಸ್ಥಳದ್ದಲ್ಲೇ ಸಾವನ್ನಪ್ಪಿದ್ದಾನೆ.
ಮತ್ತಿಬ್ಬರು ಕುರಿಕಳ್ಳರಿಗೆ ತೀವ್ರ ಗಾಯವಾಗಿದ್ದು, ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೇರಳದ ನೋಂದಣಿ ಇದ್ದ ಆಟೋ ಹಾಗೂ ಅದರೊಳಗೆ ಇದ್ದ ಕುರಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎನ್.ಆರ್. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.