ಮೈಸೂರು: ಕಾರು ಪಾರ್ಕಿಂಗ್ ಮಾಡುವ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ ಮೂವರು ಅಪರಾಧಿಗಳಿಗೆ ಹುಣಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಹುಣಸೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಿರಿಜಾಜಿ ಗ್ರಾಮದ ನಿವಾಸಿಗಳಾದ ಕುಮಾರ, ಮನು, ರವಿ ಶಿಕ್ಷೆಗೆ ಗುರಿಯಾದವರು. 19- 5- 2020 ರಂದು ಕಿರಿಜಾಜಿ ಗ್ರಾಮದ ಪ್ರವೀಣ ಎಂಬವರು ತಮ್ಮ ಕಾರನ್ನು ಪಾರ್ಕ್ ಮಾಡುವ ಸಂದರ್ಭ ಪಾರ್ಕಿಂಗ್ ವಿಚಾರವಾಗಿ ಕುಮಾರ, ಮನು, ರವಿ ಹಾಗೂ ಪ್ರವೀಣ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಸಂದರ್ಭ ಅಪರಾಧಿಗಳು ಪ್ರವೀಣ ಅವರ ಮೇಲೆ ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜಗಳ ಬಿಡಿಸಲು ಹೋದ ವಿಠ್ಠಲ ಎಂಬವರ ಮೇಲೂ ಹಲ್ಲೆ ಮಾಡಿದ್ದರು.
ನ್ಯಾಯಾಧೀಶರಾದ ಪಾಟೀಲ್ ಮೋಹನ್ ಕುಮಾರ್ ಭೀಮನಗೌಡ ಅವರು ಪ್ರಕರಣದ ವಿಚಾರಣೆ ನಡೆಸಿ ಅಪರಾಧಿಗಳಿಗೆ 2 ವರ್ಷ ಸಾದಾ ಶಿಕ್ಷೆ ಹಾಗೂ ತಲಾ 2,500 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ. ಎಂ. ಸಿ. ಶಿವಶಂಕರಮೂರ್ತಿ ವಾದ ಮಾಡಿದರು.
ಹಳೇ ಪ್ರಕರಣ, ಕಾರು ಪಾರ್ಕಿಂಗ್ ಗಲಾಟೆ, ಪೊಲೀಸ್ ಇನ್ಸ್‌ಪೆಕ್ಟರ್ ಮಗನ ಕೊಲೆ: ಗಾಜಿಯಾಬಾದ್ (ಉತ್ತರ ಪ್ರದೇಶ): ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆಯು ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ 2022ರ ಅಕ್ಟೋಬರ್ 25ರಂದು ನಡೆದಿತ್ತು. 35 ವರ್ಷದ ವರುಣ್ ಎಂಬವರು ಮೃತಪಟ್ಟಿದ್ದರು.
ಇಲ್ಲಿನ ತೀಲಾ ಮೋರ್ ಪ್ರದೇಶದಲ್ಲಿ ಉಪಹಾರ ಗೃಹದ ಮುಂದೆ ಈ ಘಟನೆ ಸಂಭವಿಸಿತ್ತು. ವರುಣ್ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಇದರ ಸಮೀಪದಲ್ಲೇ ಮತ್ತೊಂದು ಕಾರು ಪಾರ್ಕ್ ಮಾಡಲಾಗಿತ್ತು. ಆದ್ರೆ, ಈ ಎರಡು ಕಾರುಗಳ ಮಧ್ಯೆ ಡೋರ್ ಓಪನ್ ಮಾಡಲು ಸಾಧ್ಯವಾಗದಷ್ಟು ಕಡಿಮೆ ಅಂತರವಿತ್ತು. ಇದೇ ವಿಚಾರವಾಗಿ ವರುಣ್ ಮತ್ತು ಇನ್ನೋರ್ವ ವ್ಯಕ್ತಿಯ ನಡುವೆ ವಾಗ್ವಾದ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿದ್ದರಿಂದ ಇಟ್ಟಿಗೆಗಳನ್ನು ತೆಗೆದುಕೊಂಡ ಆರೋಪಿಯು ವರುಣ್ ತಲೆಯ ಮೇಲೆ ಎತ್ತಿ ಹಾಕಿದ್ದನು. ಇದರ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಸ್ಥಳ ಮಹಜರು ವೇಳೆ ಡ್ರ್ಯಾಗರ್ ಬೀಸಿದ ರೌಡಿಶೀಟರ್ ವಲಂಗಾ, ಪೊಲೀಸರಿಂದ ಗುಂಡೇಟು