ಮೈಸೂರು: ಬಿಜೆಪಿ ಪಠ್ಯ ಸಂಸ್ಕರಣ ಮಾಡುತ್ತಿದ್ದಂತೆ, ನಿಮಗೆ ಚಾತುರ್ವರ್ಣದ ನೆನಪಾಗುತ್ತಿದೆ. ಈ ದೇಶದಲ್ಲಿ ವಾಜಪೇಯಿ ಸರ್ಕಾರ ಬರುವವರೆಗೂ ಅಂತಾರಾಜ್ಯ ರಸ್ತೆ ಇರಲಿಲ್ಲ. ನಾವು ರಸ್ತೆಗಳ ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆಯೂ ಮಾತನಾಡಿ. ಪಠ್ಯ ಪುಸ್ತಕದ ಮೇಲೆ ಮಾತನಾಡುತ್ತಿರುವವರು ವಿಷಯದ ಮೇಲೆ ಮಾತನಾಡುತ್ತಿದ್ದಾರಾ? ಅಥವಾ ರಾಜಕೀಯದ ಮೇಲೆ ಮಾತನಾಡುತ್ತಿದ್ದಾರಾ ಎಂದು ಪಠ್ಯ ವಿರೋಧಿಗಳ ವಿರುದ್ಧ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗರಂ ಆಗಿದ್ದಾರೆ.
ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದ್ರೆ ಅದು ವಿರೋಧವಲ್ಲ. ಆಗ ಒಂದೇ ಪಂಥದ ಪಠ್ಯ ಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ?. ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿವೆ. ನಮ್ಮ ಇಚ್ಚೆ ಪಂಥದ್ದಲ್ಲ. ನಾವು ಎಲ್ಲವನ್ನು ಒಪ್ಪಿ ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ. ಬಿಜೆಪಿ ಪಠ್ಯ ಸಂಸ್ಕರಣ ಮಾಡುತ್ತಿದ್ದಂತೆ. ನಿಮಗೆ ಚಾತುರ್ವರ್ಣ ಎಲ್ಲ ನೆನಪಾಗುತ್ತಿದೆಯಾ ಎಂದು ಪ್ರಶ್ನಿಸಿದರು.
ವಾಜಪೇಯಿ ಅಧಿಕಾರಕ್ಕೆ ಬಂದ ಮೇಲೆ ರಸ್ತೆ, ಶಿಕ್ಷಣ, ರೈತರ ಅಭಿವೃದ್ಧಿ ಆಗಿದೆ. ಈ ಹಿಂದೆ ಎಲ್ಲವೂ ಅಮೆರಿಕ ಹೇಳಿದಂತೆ ನಡೆಯುತ್ತಿತ್ತು. ಆದರೆ, ಒಬ್ಬ ಗಂಡು ಪ್ರಧಾನಿಯಾದ ಮೇಲೆ ಎಲ್ಲವು ಬದಲಾಯಿತು. ಕಾಂಗ್ರೆಸ್ನವರ ರೀತಿ ಯಾರು ಯಾರಿಗೋಸ್ಕರ ರಾಜಕಾರಣ ಮಾಡಿಲ್ಲ. ನಮ್ಮ ದೇಶದ ಜನರಿಗೋಸ್ಕರ ರಾಜಕಾರಣ ಮಾಡುತ್ತಿದ್ದೇವೆ. ಪರಿವರ್ತನೆ ಅನ್ನುವುದು ಜಗದ ನಿಯಮ. ಎಲ್ಲ ಮುಗಿದ ಬಳಿಕ ಈಗ ಚಾತುರ್ವರ್ಣ ಬಂದಿದೆ ಎಂದು ಅಸಮಾಧಾನ ಹೊರಹಾಕಿದರು.
ಪಠ್ಯ ಪರಿಷ್ಕರಣ ವಿಚಾರದಲ್ಲಿ ದೇವನೂರು ಮಹದೇವ್ ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮಾಧ್ಯಮಗಳಲ್ಲಿ ಅವರ ಪತ್ರದ ಬಗ್ಗೆ ನೋಡಿದೆ. ಆದರೆ, ನನಗೆ ಯಾವುದೇ ಪತ್ರಗಳು ಈ ವಿಚಾರವಾಗಿ ಬಂದಿಲ್ಲ. ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಅವರು ಹೇಳುವುದರಲ್ಲೂ ಸತ್ಯ ಇದೆ. ನಾವು ಅಳವಡಿಕೆ ಮಾಡಿರುವುದಲ್ಲೂ ಸತ್ಯ ಇದೆ. ನಾನು ದೇವನೂರು ಮಹದೇವ ಅವರನ್ನ ಭೇಟಿಯಾಗುತ್ತೇನೆ. ಅವರಿಗಿರುವ ಗೊಂದಲಗಳನ್ನು ಕೇಳಿ ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷವಲ್ಲ: ಚೈತ್ರಾ ಕುಂದಾಪುರ
ದೇವನೂರು ಹೇಳುತ್ತಿರುವುದು ಸತ್ಯದ ಮಾತು. ನಾವು ಎಲ್ಲವನ್ನು ಬದಲಾವಣೆ ಮಾಡಿದ್ದೇವೆ. ಬ್ರಿಟಿಷರು ತಯಾರಿಸಿದ ಪಠ್ಯವೇ ಇತ್ತು. ನಾವು ಬಂದಮೇಲೆ ರಾಷ್ಟ್ರೀಯತೆಯನ್ನ ಪಠ್ಯದಲ್ಲಿ ಸೇರಿಸಿದ್ದೇವೆ ಎಂದು ಹೇಳಿದರು. ನಮ್ಮದು ಓನ್ಲಿ ಸಂಸ್ಕೃತಿ ಅಲ್ಲ. ಆಲ್ ಆಫ್ ಯು ಸಂಸ್ಕೃತಿ. ಎಲ್ಲ ಬಗೆಯ ಒಳ್ಳೆಯದನ್ನು ಪಡೆದು ಪಠ್ಯದಲ್ಲಿ ಅಳವಡಿಕೆ ಮಾಡುತ್ತಿದ್ದೇವೆ. ಕಾಂಗ್ರೆಸ್ನದ್ದು ನೀಚ ಬುದ್ಧಿ ವಿಚಾರಗಳ ಚರ್ಚೆಯಲ್ಲಿ ಸೋತು ವ್ಯಕ್ತಿಗತ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.