ಮೈಸೂರು: ಜನರು ಗಿರವಿ ಇರಿಸಿದ್ದ ಚಿನ್ನದೊಂದಿಗೆ ಪರಾರಿಯಾಗಿದ್ದ ಚಿನ್ನದ ಅಂಗಡಿ ಮಾಲೀಕನನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನೇಮಿರಾಮ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಮೈಸೂರಿನ ವಿವೇಕಾನಂದನಗರದಲ್ಲಿ ಕಳೆದ 10 ವರ್ಷಗಳಿಂದ ಮಾರುತಿ ಜ್ಯುವೆಲ್ಲರ್ಸ್ ಹಾಗೂ ಬ್ಯಾಂಕರ್ಸ್ ಅಂಗಡಿ ಇಟ್ಟು ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಬಂಧಿತ ನೇಮಿರಾಜ್ಗೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ನಿಂದ ತನ್ನ ವ್ಯವಹಾರದಲ್ಲಿ ನಷ್ಟ ಉಂಟಾಗಿದೆ. ಇದರಿಂದ ಬಡ್ಡಿ ಕಟ್ಟಲಾಗದೇ ಹಾಗೂ ಚಿನ್ನದ ಆಭರಣ ಮಾಡಿಸಲು ಮುಂಗಡ ಹಣ ನೀಡಿದವರಿಗೆ ಚಿನ್ನ ಕೊಡದೇ ಸತಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ನಡುವೆ ನ.9ರಂದು ಆರೋಪಿ ತನ್ನ ಅಂಗಡಿಯನ್ನು ಮುಚ್ಚಿ ಗಿರವಿ ಇಟ್ಟಿದ್ದ ಚಿನ್ನದ ಆಭರಣದೊಂದಿಗೆ ರಾಜಸ್ಥಾನದ ತನ್ನ ಸ್ವಂತ ಊರಿಗೆ ಪರಾರಿಯಾಗಿದ್ದ. ಬಳಿಕ ಅಲ್ಲೆ ಇದ್ದು, ಕೃಷಿಯಲ್ಲಿ ತೊಡಗಿದ್ದ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ತಂಡ ರಚಿಸಿದ್ದಾರೆ. ಈ ವೇಳೆ ಆರೋಪಿಯು ರಾಜಸ್ಥಾನಕ್ಕೆ ಪರಾರಿ ಆಗಿರುವ ಬಗ್ಗೆ ತಿಳಿದ ಪೊಲೀಸರು ರಾಜಸ್ಥಾನಕ್ಕೆ ತೆರಳಿದ್ದಾರೆ. ಆದರೆ, ಈ ಬಗ್ಗೆ ತಿಳಿದ ಆರೋಪಿ ಅಲ್ಲಿಂದ ಬೆಂಗಳೂರಿಗೆ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆರೋಪಿಯ ಮೊಬೈಲ್ನ ಜಾಡು ಹಿಡಿದು ಬೆಂಗಳೂರಿನಲ್ಲಿ ಬಂಧಿಸಿ ಮೈಸೂರಿಗೆ ಕರೆ ತಂದಿದ್ದಾರೆ. ಆರೋಪಿಯನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಹುಬ್ಬಳ್ಳಿ: ಚಿನ್ನದಾಸೆಗೆ ದೊಡ್ಡಮ್ಮನ ಕೊಲೆಗೈದ ಆರೋಪಿ ಸೆರೆ