ಕೆ.ಆರ್.ಪುರ: ಕೆ.ಆರ್.ಪುರದ ಭಟ್ಟರಹಳ್ಳಿಯ ಅಜಿತ್ ಬಡಾವಣೆಯಲ್ಲಿ ಅಕ್ಟೋಬರ್ 1ರಂದು ಮಧ್ಯರಾತ್ರಿ ಆಕ್ಸಿಸ್ ಬ್ಯಾಂಕ್ನಲ್ಲಿ ಗ್ಯಾಸ್ ಕಟ್ಟರ್‌ನಿಂದ ಎಟಿಎಂ ಯಂತ್ರ ಮುರಿದು ಹಣ ದೋಚಿದ್ದ ಪ್ರಕರಣದ ಇಬ್ಬರು ಅಂತಾರಾಜ್ಯ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಸಲೀಂ ( 27) ಮತ್ತು ಸಜೀದ್ (21) ಬಂಧಿತರು. ಆರೋಪಿಗಳಿಂದ 4 ಲಕ್ಷ ರೂ. ನಗದು, ಕಾರು ಹಾಗೂ ಗ್ಯಾಸ್ ಕಟ್ಟರ್ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಮೂವರು ಪ್ರಮುಖ ಆರೋಪಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಂತಾರಾಜ್ಯ ಐವರು ಆರೋಪಿಗಳ ಪೈಕಿ ಮೂವರು ಆರೋಪಿಗಳು ವಿಮಾನದಲ್ಲಿ ದೆಹಲಿಗೆ ಹೋಗಿದ್ದರು. ಇನ್ನಿಬ್ಬರು ಕಾರಿನಲ್ಲಿ ಪರಾರಿಯಾಗಿರುವುದು ಗೊತ್ತಾಗಿತ್ತು. ಕಾರಿನ ನಂಬರ್ ಆಧರಿಸಿ ಆರೋಪಿಗಳ ಪತ್ತೆಗೆ ದೆಹಲಿ, ಹರಿಯಾಣ, ರಾಜಸ್ತಾನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಇಬ್ಬರು ಆರೋಪಿಗಳು ಭರತ್‌ಪುರದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳು ಇದೇ ರೀತಿ ಕಲಬುರಗಿ, ನೆಲಮಂಗಲ ಸೇರಿದಂತೆ ರಾಜ್ಯದ ಹಲವೆಡೆ ಕೃತ್ಯ ಎಸಗಿರುವ ಮಾಹಿತಿ ಇದೆ. ಅಲ್ಲದೇ, ಬೇರೆ ರಾಜ್ಯಗಳಲ್ಲಿಯೂ ದರೋಡೆ ಮಾಡಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.