ಮೈಸೂರು: ಚಿನ್ನದ ಅಂಬಾರಿ ಹೊರುವ ಅರ್ಜುನನೇ ಇತರ ಆನೆಗಳಿಗಿಂತ ಅತಿ ಹೆಚ್ಚು ತೂಕ ಹೊಂದಿರುವ ಆನೆ ಎಂಬ ಕೀರ್ತಿಯನ್ನು ಉಳಿಸಿಕೊಂಡಿದೆ. ಈ ಬಾರಿಯೂ ದಸರಾ ದರ್ಬಾರ್ನ ಸಾರಥ್ಯವನ್ನು ಹೊರಲಿದ್ದಾನೆ ಈ ಅರ್ಜುನ.
ನಿನ್ನೆ ಅರಮನೆಗೆ ಮೊದಲ 6 ಆನೆಗಳ ಪಡೆಯನ್ನು ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಸ್ವಾಗತಿಸಿತು. ಆನೆಗಳಿಗೆ ತೂಕವನ್ನು ಮಾಡಿಸಲಾಗಿದ್ದು ಈ ಬಾರಿಯೂ ಅರ್ಜುನ ಆನೆ 5800 ಕೆ.ಜಿ. ತೂಕ ಹೊಂದುವ ಮೂಲಕ ದಸರಾ ಗಜ ಪಡೆಯಲ್ಲಿ ಅತಿ ಹೆಚ್ಚು ತೂಕ ಹೊಂದಿರುವ ಕೀರ್ತಿಯನ್ನು ಉಳಿಸಿಕೊಂಡಿದ್ದಾನೆ.
ಅಭಿಮನ್ಯು 5145 ಕೆ.ಜಿ. ತೂಕ ಹೊಂದಿದ್ದು, ಎರಡನೇ ಸ್ಥಾನ ಪಡೆದಿದೆ. ಧನಂಜಯ ಅನೆ 4460 ಕೆ.ಜಿ.ತೂಕ, ಈಶ್ವರ 3995 ಕೆ.ಜಿ., ವರಲಕ್ಷ್ಮಿ 3510 ಕೆ.ಜಿ., ವಿಜಯ 2825 ಕೆ.ಜಿ. ತೂಕ ಹೊಂದಿದೆ. ಅದಕ್ಕಾಗಿ ಇವತ್ತಿನಿಂದಲೇ ಆನೆಗಳಿಗೆ ಹೆಸರುಕಾಳು, ಉದ್ದಿನಕಾಳು, ಕುಸಲಕ್ಕಿ, ಗೋಧಿ ಸೇರಿದಂತೆ ವಿಶೇಷ ರೀತಿಯ ಆಹಾರಗಳನ್ನು ಪ್ರತಿದಿನ ಬೆಳಗ್ಗೆ ತಾಲೀಮಿಗೂ ಮುನ್ನ ಮತ್ತು ಸಂಜೆ ತಾಲೀಮು ಮುಗಿಸಿಕೊಂಡು ಬಂದ ನಂತರ ನೀಡಲಾಗುತ್ತದೆ.
ಇವುಗಳ ಜೊತೆಗೆ ಭತ್ತದ ಹುಲ್ಲಿನೊಂದಿಗೆ ತೆಂಗಿನಕಾಯಿ ಬೆಲ್ಲ ಸೇರಿಸಿ ವಿಶೇಷ ಆಹಾರವನ್ನು ನೀಡಲಾಗುವುದು. ಈ ಮೂಲಕ ಆನೆಗಳ ತೂಕವನ್ನು ಹೆಚ್ಚಿಸಲಾಗುವುದು. ಈ ವರ್ಷವು ಅರ್ಜುನ ಚಿನ್ನದ ಅಂಬಾರಿ ಹೊರಲು ಸಮರ್ಥನಾಗಿದ್ದಾನೆ ಎಂದು ಡಾ. ನಾಗರಾಜ್ ತಿಳಿಸಿದ್ದಾರೆ.
ಜೊತೆಗೆ ಹೈಕೋರ್ಟ್ ಆದೇಶದಂತೆ 60 ವರ್ಷಗಳ ನಂತರ ತೂಕ ಏರಬಾರದು ಎಂಬ ದೃಷ್ಟಿಯಿಂದ ಅಭಿಮನ್ಯು, ಈಶ್ವರ, ಗೋಪಿ ಹಾಗೂ ಗೋಪಾಲಸ್ವಾಮಿ ಆನೆಗಳ ಜೊತೆಗೆ ಎರಡನೇ ತಂಡದಲ್ಲಿ ಬದಲಿ ಅನೆಗಳನ್ನು ತಯಾರಿ ಮಾಡಲಾಗುತ್ತಿದೆ. ಇನ್ನೂ 4-5 ವರ್ಷ ಎಲ್ಲಾ ಆನೆಗಳಿಗೂ ತಾಲೀಮು ನೀಡಿ, ಯಾವ ಅನೆ ದೈಹಿಕವಾಗಿ ಫಿಟ್ ಆಗಿರುತ್ತದೆಯೋ ಅರ್ಜುನನ ನಂತರ ಜಂಬೂಸವಾರಿ ಹೊರಲು ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಡಾ. ನಾಗರಾಜ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.