ಮೈಸೂರು: ಯೋಜನೆಗಳು ಜನರಿಗೆ ತಲುಪುತ್ತಿವೆ, ಸದುಪಯೋಗವನ್ನು ಪ್ರಜೆಗಳು ಪಡೆಯುತ್ತಿದ್ದಾರೆ ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೇಳುತ್ತಿವೆ. ಆದ್ರೆ ಗ್ರಾಮೀಣ ಜನರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳಲ್ಲಿ ಕೆಲವರು ಸದ್ದಿಲ್ಲದೆ ಕುತಂತ್ರ ಮಾಡುತ್ತಿದ್ದಾರೆ. ಅಂತೆಯೇ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರ ಬದಲಾಗಿ ಯಂತ್ರೋಪಕರಣಗಳನ್ನ ಬಳಕೆ ಮಾಡಿರುವ ಆರೋಪ ಎಚ್.ಡಿ. ಕೋಟೆ ತಾಲೂಕಿನಲ್ಲಿ ಕೇಳಿಬಂದಿದೆ.
ನರೇಗಾ ಯೋಜನೆಯಂತೆ ಸ್ಥಳೀಯ ಕೂಲಿ ಕಾರ್ಮಿಕರಿಗೆ 100 ದಿನಗಳ ಕಾಲ ಕಡ್ಡಾಯವಾಗಿ ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ನೀಡಬೇಕು ಎಂಬುದು ಪಂಚಾಯತ್ ರಾಜ್ ನಿಯಮವಿದೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಯಂತ್ರೋಪಕರಣಗಳನ್ನು ಅಧಿಕಾರಿಗಳು ಬಳಕೆ ಮಾಡಿದ್ದಾರೆ ಎಂಬ ದೂರು ಜನರಿಂದ ಕೇಳಿ ಬಂದಿದೆ.
ಎಚ್. ಡಿ. ಕೋಟೆ ತಾಲೂಕಿನ ಅಂತರಸಂತೆ ಹೋಬಳಿಯ ನೂರಲಕುಪ್ಪೆ ಗ್ರಾಮ ಪಂಚಾಯತ್ನಲ್ಲಿ ನರೇಗಾ ಅಕ್ರಮ ಬೆಳಕಿಗೆ ಬಂದಿದೆ. 50 ಲಕ್ಷ ರೂ.ಗಳ ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ಅನುಮತಿ ಪಡೆದು ತಾರಕ ನಾಲೆಯ ಹೂಳೆತ್ತುವ ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿಗೆ ಕೂಲಿ ಕಾರ್ಮಿಕರನ್ನ ಬಳಸದೆ ಜೆಸಿಬಿ ಯಂತ್ರದಿಂದ ಮಾಡಿಸಿರುವ ಅಕ್ರಮ ಬೆಳಕಿಗೆ ಬಂದಿದೆ. ಈ ಮೂಲಕ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾಮಗಾರಿ ಸ್ಥಳಕ್ಕೆ ಕೂಲಿ ಕಾರ್ಮಿಕರನ್ನ ಕರೆಸಿ ಮೇಲ್ನೋಟಕ್ಕೆ ಕೆಲಸ ಮಾಡಿಸುತ್ತಿರುವಂತೆ ಫೋಟೋ ಕ್ಲಿಕ್ಕಿಸಿ, ಅಕ್ರಮ ಎಸಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನೂರಲಕುಪ್ಪೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ನಮ್ಮ ಹೋರಾಟ ನಿರಂತರ : ಡಿಕೆಶಿ