ಮೈಸೂರು: ನಟ ದರ್ಶನ್ ಫಾರ್ಮ್ ಹೌಸ್ನಲ್ಲಿ ವಲಸೆ ಹಕ್ಕಿಗಳನ್ನು ಇಟ್ಟುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವೈಲ್ಡ್ ಲೈಫ್ ಸೆಕ್ಷನ್ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಸಂಕ್ರಾಂತಿ ಹಬ್ಬದಿಂದ ಸಾಮಾಜಿಕ ಜಾಲತಾಣಗಳಲ್ಲಿ ಫಾರ್ಮ್ ಹೌಸ್ನದ್ದು ಎನ್ನಲಾದ ವಿಡಿಯೋವೊಂದು ಹರಿದಾಡುತ್ತಿದೆ. ಈ ವಿಡಿಯೋ ಗಮನಿಸಿದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಶುಕ್ರವಾರ ಸಂಜೆ ಫಾರ್ಮ್ ಹೌಸ್ಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾರ್ಹೆಡೆಡ್ ಗೂಸ್ ಎಂಬ ನಾಲ್ಕು ವಲಸೆ ಹಕ್ಕಿಗಳನ್ನು ಇರಿಸಿರುವುದು ಕಂಡು ಬಂದಿದೆ. ತಕ್ಷಣ ಆ ನಾಲ್ಕು ಪಕ್ಷಿಗಳನ್ನ ತಮ್ಮ ವಶಕ್ಕೆ ಪಡೆದು ನಿಯಮಾನುಸಾರ ಪ್ರಕರಣ ದಾಖಲಿಸಿರುವುದಾಗಿ ಉಪ ಅರಣ್ಯಾಧಿಕಾರಿ ಭಾಸ್ಕರ್ ತಿಳಿಸಿದರು.
ಮೈಸೂರು - ಟಿ.ನರಸೀಪುರ ರಸ್ತೆಯಲ್ಲಿ ಇರುವ ಫಾರ್ಮ್ ಹೌಸ್ ಮೇಲೆ ಕಳೆದ ರಾತ್ರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮಧ್ಯ ಏಷ್ಯಾದಿಂದ ವಲಸೆ ಬರುವ, ಬಾರ್ಹೆಡೆಡ್ ಗೂಸ್ ಜಾತಿಯ ನಾಲ್ಕು ಪಕ್ಷಿಗಳನ್ನ ವಶಕ್ಕೆ ಪಡೆದಿದ್ದಾರೆ.
ತನಿಖೆ ಮುಂದುವರೆದಿದೆ: 'ಈ ಪಕ್ಷಿಗಳನ್ನು ಫಾರ್ಮ್ ಹೌಸ್ನಲ್ಲಿ ಸಣ್ಣ ಡಬ್ಬಿಗಳಲ್ಲಿ ಇಟ್ಟಿರುವುದು ಕಂಡು ಬಂದಿದೆ. ಇದು ಅರಣ್ಯ ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಬಗ್ಗೆ ಪ್ರಾಥಮಿಕ ತನಿಖೆಯನ್ನು ನಡೆಸಿ, ಟಿ. ನರಸೀಪುರ ನ್ಯಾಯಾಲಯಕ್ಕೆ ವಶಪಡಿಸಿಕೊಂಡಿರುವ ನಾಲ್ಕು ಪಕ್ಷಿಗಳನ್ನು ಹಾಜರುಪಡಿಸಲಾಗಿದೆ. ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ 1972 ಅದರ ತಿದ್ದುಪಡಿ ಕಾಯ್ದೆ 2022 ಕಾಲಂ 9, 51 ಹಾಗೂ 39ರ ಅಡಿ ಪ್ರಕರಣ ದಾಖಲಾಗಿದ್ದು, ಸದ್ಯ ತನಿಖೆ ಮುಂದುವರೆದಿದೆ' ಎಂದು ಅರಣ್ಯಾಧಿಕಾರಿ ಭಾಸ್ಕರ್ ವಿವರಿಸಿದರು.
ಮಧ್ಯ ಏಷ್ಯಾದ ವಲಸೆ ಪಕ್ಷಿಗಳು: ಬಾರ್ಹೆಡೆಡ್ ಗೂಸ್ ಜಾತಿಯ ಪಕ್ಷಿಗಳು ಮಧ್ಯ ಏಷ್ಯಾದ ಕಜಕಿಸ್ತಾನ, ಮಂಗೋಲಿಯ, ಟಿಬೆಟ್ ಭಾಗದಲ್ಲಿ ಕಂಡು ಬರುತ್ತವೆ. ಆ ಪ್ರದೇಶದಲ್ಲಿ ಶೀತ ಹೆಚ್ಚಾದಾಗ ತಮ್ಮ ರಕ್ಷಣೆಗಾಗಿ ಹಿಮಾಲಯವನ್ನ ದಾಟಿ ಭಾರತದ ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಕೆರೆಗಳ ಬಳಿ ವಾಸ ಮಾಡುತ್ತವೆ. ಮಧ್ಯ ಏಷ್ಯಾದಲ್ಲಿ ಚಳಿ ಕಡಿಮೆಯಾದಾಗ, ಪುನಃ ಈ ಪಕ್ಷಿಗಳು ಅದರ ಸ್ಥಳಕ್ಕೆ ಹೋಗಿ ಮರಿ ಮಾಡುತ್ತವೆ ಎನ್ನುತ್ತಾರೆ ಅರಣ್ಯಾಧಿಕಾರಿ ಭಾಸ್ಕರ್.
ಇದನ್ನೂ ಓದಿ: ಹೆಣ್ಣು ಮಕ್ಕಳನ್ನು ಮುಟ್ಟುವ ಕಾಮುಕರಿಗೆ ತಕ್ಕ ಪಾಠವಾಗಬೇಕು: ನಟ ದರ್ಶನ್