ಮೈಸೂರು : ರಾಜ್ಯದ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ, ನಾಳೆ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 2905 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಕೆ ವಿ. ರಾಜೇಂದ್ರ ಮಾಧ್ಯಮಗೋಷ್ಟಿಯಲ್ಲಿ ವಿವರಿಸಿದರು. ಈ ವೇಳೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಜಿಲ್ಲಾ ಪಂಚಾಯತ್ ಸಿಇಒ ಗಾಯತ್ರಿ ಉಪಸ್ಥಿತಿರಿದ್ದರು.
ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಹೆಳಿದ್ದೇನು: ಜಿಲ್ಲೆಯ 11ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2905 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 574 ಅತಿಸೂಕ್ಷ್ಮ ಮತಗಟ್ಟೆಗಳು ಇದ್ದು, ಅದರಲ್ಲಿ 53 ಮತಗಟ್ಟೆಗಳು ವರುಣಾ ವ್ಯಾಪ್ತಿಯಲ್ಲಿದ್ದು, ಒಟ್ಟು ಮತಗಟ್ಟೆಗಳಲ್ಲಿ 1597 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 143 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಒಟ್ಟು 26,55,988 ಮತದಾರರಿದ್ದಾರೆ. ಅದರಲ್ಲಿ ಪುರುಷ ಮತದಾರರು 13,17,121. ಮಹಿಳಾ ಮತದಾರರು 13,38,637 ಇದ್ದು, ಹಾಗೂ ಇತರ 230 ಮತದಾರರಿದ್ದಾರೆ ಎಂದು ತಿಳಿಸಿದರು.
ಮತದಾನದ ಸಮಯ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಾಳೆ ಮತದಾನ ಇರುವುದರಿಂದ ಸಂತೆ, ಜಾತ್ರೆಗಳನ್ನು ಮುಂದೂಡಲಾಗಿದೆ. ಮತಗಟ್ಟೆಗೆ ಮೊಬೈಲ್ ಫೋನ್, ಕ್ಯಾಮರಾ ಸೇರಿದಂತೆ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿದ್ದು. ಮತದಾನ ಸಂದರ್ಭದಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುವುದು. ಈಗಾಗಲೇ 80 ವರ್ಷ ಮೆಲ್ಪಟ್ಟ 2667 ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು ಮತ ಚಲಾಯಿಸಿದ್ದಾರೆ.
ಮತದಾನದ ಅಧಿಕಾರಿಗಳನ್ನು ಮತಗಟ್ಟೆಗೆ ಕರೆದುಕೊಂಡು ಹೋಗಲು 481 ಕೆಎಸ್ ಆರ್ ಟಿ ಸಿ ಬಸ್ ಗಳು, 84 ಮ್ಯಾಕ್ಸಿ ಕ್ಯಾಬ್ ಹಾಗೂ 29 ಜೀಪ್ ಗಳನ್ನು ವ್ಯವಸ್ಥೆ ಮಾಡಲಾಗಿದ್ದು. ಮತದಾನ ಮುಗಿದ ಬಳಿಕ, ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಹೊಸ ಮಹಾರಾಣಿ ಕಾಲೇಜಿನಲ್ಲಿ ಮತ ಪೆಟ್ಟಿಗೆಗಳನ್ನು ಸಂಗ್ರಹಿಸಿ ಇಡಲಾಗುವುದು, 13ಕ್ಕೆ ಮತ ಏಣಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ವಿ.ರಾಜೇಂದ್ರ ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.
ನಗರ ಪೋಲಿಸ್ ಕಮಿಷನರ್ ಹಾಗೂ ಎಸ್ ಪಿ ಮಾತನಾಡಿ, ಚುನಾವಣಾ ದಿನಾಂಕ ಘೋಷಣೆ ಆದ ದಿನದಿಂದ ಇಲ್ಲಿಯವರೆಗೆ 3,20,32,000 ರೂಪಾಯಿ ಹಣ ಜಪ್ತಿ ಮಾಡಲಾಗಿದ್ದು. ಇದರ ಜೊತೆಗೆ 8 ಕೋಟಿ ಮೌಲ್ಯದ ಮದ್ಯ ಸೇರಿ, ಒಟ್ಟು 11 ಕೋಟಿ ಮೌಲ್ಯದ ಹಣ ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯ 40 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಗೂಂಡಾ ಕಾಯ್ದೆಯಡಿ 20 ಮಂದಿಯನ್ನು ಗಡಿಪಾರು ಮಾಡಲಾಗಿದೆ. 110 ರೌಡಿಗಳ ಮನೆಯ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿಸಿದರು.
ಮೈಸೂರು ನಗರ ವ್ಯಾಪ್ತಿಯಲ್ಲಿ 2600 ಪೊಲೀಸರನ್ನು ಮತಗಟ್ಟೆಗೆ ನಿಯೋಜನೆ ಮಾಡಲಾಗಿದ್ದು, ಮೈಸೂರು ಜಿಲ್ಲೆಯಲ್ಲಿ 2514 ಮಂದಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ವಿಶೇಷವಾಗಿ ವರುಣಾದಲ್ಲಿ 54 ಸೂಕ್ಷ್ಮ ಮತಗಟ್ಟೆಗಳು ಇವೆ ಎಂದು ಮೈಸೂರು ನಗರ ಹಾಗೂ ಮೈಸೂರು ಗ್ರಾಮಾಂತರ ಪ್ರದೇಶದ ಬಗ್ಗೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಮದುವೆ ಮಾದರಿ ಆಮಂತ್ರಣ ಪತ್ರಿಕೆ ಮೂಲಕ ಮತದಾನಕ್ಕೆ ಆಹ್ವಾನ : ನಂಜುಮಳಿಗೆ ಸುತ್ತಮುತ್ತ ಸಾರ್ವಜನಿಕರಿಗೂ ಹಾಗೂ ವ್ಯಾಪಾರಸ್ಥರಿಗೆ ಮಂಗಳವಾರ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ಮತದಾನಕ್ಕೆ ಮದುವೆ ಮಾದರಿ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿದೆ. ಮಾದರಿ ಆಮಂತ್ರಣ ಪತ್ರಿಕೆ ಮುದ್ರಿಸಿ, ಸಾರ್ವಜನಿಕರಿಗೆ ಹಾಗೂ ಮನೆಮನೆಗೆ ತೆರಳಿ ಆಮಂತ್ರಣ ಪತ್ರಿಕೆ ತಲುಪಿಸುವ ಮೂಲಕ ಮತದಾನ ಮಾಡುವಂತೆ ಮತದಾರ ಆಹ್ವಾನಿಸಲಾಯಿತು.
ಭಾರತ ಸರ್ಕಾರ ಹೆಸರಿನಲ್ಲಿ ಈ ಚುನಾವಣೆ ಆಯೋಗದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ, ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ 1945 ಸರಿಯಾದ ಶ್ರೀಶೋಭಕೃತ್ ನಾಮಸಂವತ್ಸರ ದಿನಾಂಕ 10.5.2023 ರ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಲ್ಲುವ ಶುಭಗಳಿಗೆಯಲ್ಲಿ ಮತದಾನ ಚುನಾವಣೆಯೋತ್ಸವ ನೆರವೇರುವಂತೆ ಭಾರತ ಸರ್ಕಾರ ನಿಶ್ಚಯಿಸಿರುವುದರಿಂದ, ತಾವು ಸಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಸ್ವಯಿಚ್ಛೆಯಂತೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯ ರೂಪಿಸಬೇಕು ಎಂದು ಕೋರುವ ತಮ್ಮ ಆಗಮನಾಭಿಲಾಷಿಗಳು ಭಾರತ ಚುನಾವಣೆ ಆಯೋಗ. ಸ್ಥಳ ತಮ್ಮ ತಮ್ಮ ಮತಗಟ್ಟೆ ಕೇಂದ್ರ ಎಂದು ಕೋರಲಾಗಿದೆ.
ವಿಶೇಷ ಸೂಚನೆಯಾಗಿ ದಯವಿಟ್ಟು ಉಡುಗೊರೆ ಕೊಡಬೇಡಿ ಮತ್ತು ಪಡೆಯಬೇಡಿ. ಬಲಿಷ್ಠ ಭಾರತ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ, ಹಣ ಕೇಳದೆ ಮತ ನೀಡಿ ಆಶೀರ್ವದಿಸಿ, ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಎಸ್ ಎನ್ ರಾಜೇಶ್, ಆನಂದ್, ಆದರ್ಶ್, ಗಿರೀಶ್, ಸುಚೇಂದ್ರ, ಚಕ್ರಪಾಣಿ, ಹಾಗೂ ಭಾಗವಹಿಸಿದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆ : ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ