ಮೈಸೂರು: ಅನಾರೋಗ್ಯದಿಂದ ಪತಿ ಮನೆಯಲ್ಲಿ ಸಾವನ್ನಪ್ಪಿರುವ ದೃಶ್ಯ ನೋಡಿ ಆಘಾತಕ್ಕೊಳಗಾದ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಹುಣಸೂರು ನಗರದ ಕೊಯಮತ್ತೂರು ಕಾಲೋನಿಯಲ್ಲಿ ಸೋಮವಾರ ನಡೆದಿದೆ. ಬಂಡಾರಿ ಎಂಬವರ ಪುತ್ರ ದೊರೆ (55) ಹಾಗೂ ಇವರ ಪತ್ನಿ ಸಾವಿತ್ರಿ (47) ಮೃತಪಟ್ಟಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಮಗಳಿದ್ದು ಮದುವೆಯಾಗಿ ಬೇರೆಡೆ ವಾಸವಾಗಿದ್ದಾರೆ.
ದೊರೆ ಮೂರು ತಿಂಗಳ ಹಿಂದೆ ಕೆಲಸಕ್ಕೆಂದು ಕೆ.ಆರ್. ನಗರಕ್ಕೆ ಹೋಗಿದ್ದು ಅಪಘಾತಕ್ಕೊಳಗಾಗಿ ತಮಿಳುನಾಡಿನ ಕೊಯಮತ್ತೂರು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ವಾರದ ಹಿಂದಷ್ಟೇ ಮನೆಗೆ ಬಂದಿದ್ದರು. ಐಡಿಎಫ್‌ಸಿ ಮತ್ತು ಇಕ್ವಿಟಾಕ್ಸ್ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದು, ವಿವಿಧ ಸಂಘಗಳಲ್ಲಿಯೂ ಸಹ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಮನೆಯಲ್ಲೇ ಇವರು ಔಷದೋಪಚಾರ ಪಡೆದುಕೊಳ್ಳುತ್ತಿದ್ದರು. ಸೋಮವಾರ ಸಾವಿತ್ರಿ, ಪತಿಗೆ ಬೆಳಿಗ್ಗೆ ತಿಂಡಿ ತಿನ್ನಿಸಿ ಔಷಧ ನೀಡಿ ಕೂಲಿ ಕೆಲಸಕ್ಕೆಂದು ಹೊರ ಹೋಗಿದ್ದರು. ಮಧ್ಯಾಹ್ನ ಮನೆಗೆ ಬಂದಾಗ ಪತಿ ಮೃತಪಟ್ಟ ವಿಷಯ ಗೊತ್ತಾಗಿದೆ. ಪತಿ ಮಾಡಿರುವ ಸಾಲ ತೀರಿಸುವ ಬಗೆಗಿನ ದಿಗಿಲಿನಿಂದ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮನೆ ಬಾಗಿಲು ತೆರೆದಿರುವುದನ್ನು ಕಂಡು ಪಕ್ಕದ ಮನೆಯವರು ಕೂಗಿದ್ದಾರೆ. ಈ ವೇಳೆ ಯಾರೂ ಹೊರಬರದೇ ಇದ್ದಾಗ ಅನುಮಾನಗೊಂಡು ಒಳಹೋಗಿ ನೋಡಿದಾಗ ದಂಪತಿ ಸಾವನ್ನಪ್ಪಿರುವುದು ಕಂಡುಬಂದಿದೆ. ಹುಣಸೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರದಲ್ಲೂ ಇಂಥದ್ದೇ ಘಟನೆ: ಅಪಘಾತದಲ್ಲಿ ಸಾವನ್ನಪ್ಪಿದ ಮೊಮ್ಮಗನ ಮೃತದೇಹ ಕಂಡು ತಾತ ಹೃದಯಸ್ತಂಭನದಿಂದ ಇಹಲೋಕ ತ್ಯಜಿಸಿದ ಘಟನೆ ವಿಜಯಪುರ ಜಿಲ್ಲೆಯ ಗೊಳಸಂಗಿ ಸಮೀಪದ ವಂದಾಲ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಅಭಿಷೇಕ ಚಂದ್ರಶೇಖರ ಪ್ಯಾಟಿಗೌಡ್ರ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ. ಈತ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದು ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದ. ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದ. ಸುದ್ದಿ ತಿಳಿದು ಅಭಿಷೇಕನ ಮೃತದೇಹ ನೋಡಲು ಬಂದಿದ್ದ ತಾತ ಬಸಪ್ಪ ರಾಮಪ್ಪ ಗುಡ್ಡದ (74) ಮೃತದೇಹ ನೋಡಿದ ತಕ್ಷಣ ಹೃದಯಸ್ತಂಭನ ಉಂಟಾಗಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಮೊಮ್ಮಗನ ಮೃತದೇಹ ನೋಡಿ ಆಘಾತ.. ಕ್ಷಣದಲ್ಲೇ ಹಾರಿಹೋಯ್ತು ತಾತನ ಪ್ರಾಣ