ಮೈಸೂರು: ಕೆ.ಆರ್.ನಗರ ತಾಲೂಕಿನ ಭೇರ್ಯ ಬಳಿಯ ಮಠದ ಕಾವಲ್ ಅರಣ್ಯ ಪ್ರದೇಶದಲ್ಲಿರುವ ಪುರಾತನ ದೇವಾಲಯದಲ್ಲಿನ ದೇವಾಲಯಗಳಲ್ಲಿ ದೇವರ ಮೂರ್ತಿ ಧ್ವಂಸಗೊಳಿಸಿದ್ದ ಆರೋಪಿಯನ್ನು ಸಾಲಿಗ್ರಾಮ ಪೊಲೀಸರು ಬಂಧಿಸಿದ್ದಾರೆ. ಜನರು ಕಲ್ಲಿನ ವಿಗ್ರಹಗಳನ್ನು ಪೂಜೆ ಮಾಡಿ ಮೋಸ ಹೋಗುತ್ತಿದ್ದಾರೆ ಎಂದು ಆರೋಪಿಯು ಅವುಗಳನ್ನು ಭಗ್ನಗೊಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಕಿಹೆಬ್ಬಾಳು ಚಿಕ್ಕ ಭೇರ್ಯ ಗ್ರಾಮದ ವಾಸಿಯಾಗಿರುವ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯ ಮಾಹಿತಿ ಬಹಿರಂಗ ಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.
ಘಟನೆ ಹಿನ್ನೆಲೆ:
ಡಿಸೆಂಬರ್ 7ರಂದು ಭೇರ್ಯ ಗ್ರಾಮದ ಸಮೀಪ ಶ್ರೀ ಸಿದ್ಧಲಿಂಗೇಶ್ವರ ಮತ್ತು ಮಲೆ ಮಹದೇಶ್ವರ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ಶಿವಲಿಂಗಗಳನ್ನು ಭಗ್ನಗೊಳಿಸಲಾಗಿತ್ತು. ಘಟನೆ ಸಂಬಂಧ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಾಲಿಗ್ರಾಮ ಪೊಲೀಸರು ತನಿಖೆ ಕೈಗೊಂಡಿದ್ದರು.
ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮತ್ತು ಎಎಸ್ಪಿ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣವನ್ನು ಪತ್ತೆ ಹಚ್ಚಲು ಪೊಲೀಸ್ ಉಪ ಅಧೀಕ್ಷಕ ಡಾ.ಎ.ಆರ್. ಸುಮಿತ್, ಸಾಲಿಗ್ರಾಮ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಕೆ.ಆರ್.ನಗರ ತಾಲೂಕಿನ ಚಿಕ್ಕ ಭೇರ್ಯ ಗ್ರಾಮದ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಇದರ ಜೊತೆಗೆ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಸರಹದ್ದಿನ ವಡ್ಡರುಗುಡಿ ಗ್ರಾಮದ ಶ್ರೀ ಲಕ್ಷ್ಮೀ ದೇವಿ ಅಮ್ಮನವರ ದೇವಸ್ಥಾನದ ಬೀಗ ಮುರಿದು ದೇವಿಯ ಪ್ರತಿಮೆ ಕಿತ್ತು ವಿರೂಪಗೊಳಿಸಿ ತೆರೆದ ಬಾವಿಗೆ ಎಸೆದಿರುವುದು. ಅಲ್ಲದೆ, ಬೀರವಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬೀಗ ಮುರಿಯಲು ಯತ್ನಿಸಿ ಸಾರ್ವಜನಿಕರು ಬಂದದ್ದರಿಂದ ಪರಾರಿಯಾಗಿದ್ದಾಗಿ ಆರೋಪಿ ತಿಳಿಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಗ್ರಾಮಾಂತರ ವಿಭಾಗದ ಉಪ ಅಧೀಕ್ಷಕ ಡಾ.ಎ.ಆರ್. ಸುಮಿತ್, ಆರೋಪಿಯು ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮುಗಿಸಿದ್ದು, ಜೀವನೋಪಾಯಕ್ಕಾಗಿ ವ್ಯವಸಾಯ ಮಾಡಿಕೊಂಡಿದ್ದಾನೆ. ಜನರು ಕಲ್ಲಿನ ವಿಗ್ರಹಗಳನ್ನು ಪೂಜಿಸಿ ಮೋಸ ಹೋಗುತ್ತಿದ್ದಾರೆ ಎಂದು ಭಾವಿಸಿ ಕೆಲವು ದಿನಗಳಿಂದ ದೇವಸ್ಥಾನಗಳಲ್ಲಿನ ಮೂರ್ತಿಗಳನ್ನು ಭಗ್ನಗೊಳಿಸುತ್ತಿದ್ದ. ಆದರೆ ನಗ ನಾಣ್ಯ ಹಾಗೂ ದೇವರ ಒಡವೆ ಮುಟ್ಟುತ್ತಿರಲಿಲ್ಲ. ಈ ವ್ಯಕ್ತಿಯ ಪೂರ್ಣ ವಿವರಗಳನ್ನು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವ್ಯಾಪಾರಿ ಅಪಹರಿಸಿ ಕೆಜಿಗೂ ಅಧಿಕ ಚಿನ್ನ ಲೂಟಿ : ಕಲಬುರಗಿಯಲ್ಲಿ ಖತರ್ನಾಕ್ ಸುಲಿಗೆಕೋರರು ಅರೆಸ್ಟ್