ಮೈಸೂರು: ಬೈಕ್ ಓವರ್‌ಟೇಕ್ ಮಾಡಲು ಹೋದ ವಿಂಗರ್ ವಾಹನದ ನಿಯಂತ್ರಣ ತಪ್ಪಿ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಹೊಮ್ಮರಗಳ್ಳಿ ಗ್ರಾಮದ ಸಮೀಪ ನಡೆದಿದೆ.
ಹೆಚ್.ಡಿ.ಕೋಟೆ ತಾಲ್ಲೂಕು ಹಾಗೂ ಮೈಸೂರಿನ ನಿವಾಸಿಗಳಾದ ನವೀನ್, ಕುಮಾರ್, ಮಲ್ಲಿಗೆ, ಪುಟ್ಟಸ್ವಾಮಿ, ಪುಟ್ಟಮ್ಮ, ಇಂದ್ರಾಣಿ, ಶ್ರೀನಿವಾಸ್, ನರೇಂದ್ರ, ಜಯಲಕ್ಷ್ಮಿ, ಆಶಾ ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನ ಜಿಲ್ಲೆಯ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ವಿಂಗರ್ ವಾಹನವು, ಹೊಮ್ಮರಗಳ್ಳಿ ಸಮೀಪ ಬೈಕ್ನ್ನು ಓವರ್‌ಟೇಕ್ ಮಾಡಲು ಮುಂದಾದಾಗ ಹೆಚ್.ಡಿ.ಕೋಟೆ ಕಡೆಯಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಚಾಲಕ ವಿಂಗರ್ ವಾಹನವನ್ನು ನಿಯಂತ್ರಿಸಲಾಗದೆ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ.
ಘಟನೆಯಿಂದ ಗಾಯಗೊಂಡಿರುವ ಗಾಯಾಳುಗಳನ್ನು ಸಾರ್ವಜನಿಕರ ನೆರವಿನಿಂದ ಜಿಲ್ಲಾ ಕೆ.ಆರ್.ಆಸ್ಪತ್ರೆಗೆ ಸೇರಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹೆಚ್.ಡಿ.ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.