ಮೈಸೂರು: ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ಮೂಲ ಮೂರ್ತಿಗೆ ನವರಾತ್ರಿಯ 9 ದಿನವೂ 9 ಅಲಂಕಾರಗಳನ್ನು ಮಾಡಲಾಗುತ್ತದೆ. ಇದರ ಜತೆಗೆ ವಿಜಯ ದಶಮಿಯ ದಿನ ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಜಂಬೂಸವಾರಿಯಲ್ಲಿ ಆಸೀನಳಾಗುವ ಚಾಮುಂಡೇಶ್ವರಿ ಉತ್ಸವ ಮೂರ್ತಿ ಹಾಗೂ ಚಾಮುಂಡಿ ಬೆಟ್ಟದಲ್ಲಿರುವ ಉತ್ಸವ ಮೂರ್ತಿಗೆ ಪ್ರತಿದಿನ ಉತ್ಸವ ಹಾಗೂ ಸಂಜೆ ಅರಮನೆಯಲ್ಲಿ ರಾಜ ವಂಶಸ್ಥರು ನಡೆಸುವ ಖಾಸಗಿ ದರ್ಬಾರ್ ರೀತಿಯಲ್ಲಿ, ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ 9 ದಿನವೂ ದರ್ಬಾರ್ ನಡೆಸಲಾಗುತ್ತದೆ.
ದಸರಾದ ಉದ್ಘಾಟನಾ ದಿನ ಅಕ್ಟೋಬರ್ 15 ರಂದು ಬ್ರಾಹ್ಮಿ ಅಲಂಕಾರ, ಅ.16 ರಂದು ಮಾಹೇಶ್ವರಿ ಅಲಂಕಾರ, ಅ.17 ರಂದು ಕೌಮಾರಿ ಅಲಂಕಾರ, ಅ.18 ರಂದು ವೈಷ್ಣವಿ ಅಲಂಕಾರ, ಅ.19 ರಂದು ವರಾಹಿ ಅಲಂಕಾರ, ಅ.20 ರಂದು ಇಂದ್ರಾಣಿ ಅಲಂಕಾರ, ಅ.21 ರಂದು ಸರಸ್ವತಿ ಅಲಂಕಾರ, ಅದೇ ದಿನ ಸಂಜೆ ಚಾಮುಂಡೇಶ್ವರಿ ಮೂಲ ಮೂರ್ತಿಗೆ ವರ್ಷದಲ್ಲಿ ಕಾಳರಾತ್ರಿ ಪೂಜೆ ನಡೆಯುತ್ತದೆ. ಅ.22 ರಂದು ದುರ್ಗಾ ಅಲಂಕಾರ, ಅ.23 ರಂದು ಮಹಾಲಕ್ಷ್ಮಿ ಅಲಂಕಾರ, ಕೊನೆಯ ದಿನ ನವರಾತ್ರಿಯ ವಿಜಯ ದಶಮಿಯ ದಿನ ಅ.24 ರಂದು ಅಶ್ವಾರೋಹಣ ಅಲಂಕಾರವನ್ನು ಮಾಡಲಾಗುತ್ತದೆ. ಹೀಗೆ ನವರಾತ್ರಿಯ 9 ದಿನ ಹಾಗೂ ವಿಜಯ ದಶಮಿಯ ದಿನ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.
ಚಾಮುಂಡಿ ಬೆಟ್ಟಕ್ಕೆ ಅರಮನೆಯಿಂದ ತೆಗೆದುಕೊಂಡು ಹೋದ ಚಿನ್ನದ ಅಂಬಾರಿಯಲ್ಲಿ ಇರುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಹಾಗೂ ಮೂಲ ಮೂರ್ತಿಗೆ ವಿಶೇಷ ಅಲಂಕಾರವನ್ನು ಸಹ 9 ದಿನಗಳ ಕಾಲ ಮಾಡಲಾಗುತ್ತದೆ. ಆ ಮೂಲಕ ನವರಾತ್ರಿಯನ್ನ ಅರಮನೆಯಲ್ಲಿ ಹೇಗೆ ಆಚರಿಸುತ್ತಾರೋ, ಅದೇ ರೀತಿಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿಯನ್ನು ಆಚರಿಸುವುದು ವಿಶೇಷ.
ಪ್ರತಿನಿತ್ಯ ವಿಶೇಷ ಪೂಜೆ: ನವರಾತ್ರಿಯ 9 ದಿನಗಳು ಅರಮನೆಯಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳ ರೀತಿಯಲ್ಲೇ ಚಾಮುಂಡೇಶ್ವರಿ ದೇವಾಲಯದಲ್ಲೂ ನಡೆಯುತ್ತದೆ. ಪ್ರತಿನಿತ್ಯ ಬೆಳಿಗ್ಗೆ ಮೂಲ ಚಾಮುಂಡಿ ತಾಯಿಗೆ ಅಭಿಷೇಕ, ಹೋಮ-ಹವನಗಳು, ಚಕ್ರಪೂಜೆ, ವಿಶೇಷ ಅಲಂಕಾರ ಹಾಗೂ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದ ಸುತ್ತಲೂ ಉತ್ಸವ ಮಾಡಲಾಗುತ್ತದೆ. ಉತ್ಸವ ಮೂರ್ತಿಯನ್ನು ಭಕ್ತರ ದರ್ಶನಕ್ಕೆ ವಿಶೇಷ ಅಲಂಕಾರ ಮಾಡಿಡಲಾಗುತ್ತದೆ.
ಸಂಜೆ ವಿಶೇಷ ಪೂಜೆ ಜೊತೆಗೆ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನದಲ್ಲಿ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸುವಂತೆ, ಚಾಮುಂಡಿ ಬೆಟ್ಟದಲ್ಲೂ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ದರ್ಬಾರ್‌ನಲ್ಲಿಟ್ಟು, ದರ್ಬಾರ್ ಉತ್ಸವ ಮಾಡುವುದು ಸಂಪ್ರದಾಯ. ರಾತ್ರಿ ಮಹಾಮಂಗಳಾರತಿ ನಂತರ ಆ ದಿನದ ನವರಾತ್ರಿಯ ಪೂಜೆ ಮುಕ್ತಾಯವಾಗುತ್ತದೆ.
ಹೀಗೆ 9 ದಿನಗಳು ನವರಾತ್ರಿಯ ಆಚರಣೆ ಜತೆಗೆ ಹತ್ತನೇ ದಿನವೂ ವಿಜಯ ದಶಮಿಯ ದಿನ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತದೆ. ಅರಮನೆಯಲ್ಲಿ ಮತ್ತೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ವಿಶೇಷವಾಗಿ ಅಲಂಕೃತವಾದ ಚಿನ್ನದ ಅಂಬಾರಿಯಲ್ಲಿ ಇಟ್ಟು, ಗಣ್ಯರ ಪುಷ್ಪಾರ್ಚನೆಯ ನಂತರ ಜಂಬೂಸವಾರಿ ಮೆರವಣಿಗೆ ಆರಂಭವಾಗುತ್ತದೆ. ಹೀಗೆ ನವರಾತ್ರಿಯ ವಿಶೇಷ ಪೂಜೆಗಳು ಚಾಮುಂಡಿ ಬೆಟ್ಟದಲ್ಲಿ ಸಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದೆ.
ಇದನ್ನೂ ಓದಿ: ಮೈಸೂರು ದಸರಾ: ಗಮನಸೆಳೆದ ಕರಾವಳಿಯ ಚೆಂಡೆವಾದನ- ವಿಡಿಯೋ