ಮೈಸೂರು: ಆರನೇ ವೇತನ ಆಯೋಗ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ, ಐದನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಕೆಲ ಸಾರಿಗೆ ಕೆಲ ಚಾಲಕರು ಹಾಗೂ ನಿರ್ವಾಹಕರು ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಆಗಮಿಸುತ್ತಿದ್ದಾರೆ.
ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಇಂದು ಬೆಂಗಳೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಿಗೆ 40ಸಾರಿಗೆ ಬಸ್ಗಳು ಸಂಚಾರ ಆರಂಭಿಸಿವೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರಿಯ ಬಸ್ ನಿಲ್ದಾಣದ ಸಂಚಲನಾಧಿಕಾರಿ ಕೆ.ಹೇಮಂತ್ ಕುಮಾರ್, ಕೆಲ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಹೀಗಾಗಿ ಇಂದು 40 ಬಸ್ ಗಳು ಸಂಚಾರ ಆರಂಭಿಸಿವೆ ಎಂದು ತಿಳಿಸಿದ್ರು.
ಸಾರಿಗೆ ಸಿಬ್ಬಂದಿ ಹಂತ ಹಂತವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಬೆನ್ನಲ್ಲೇ, ನಗರ ಬಸ್ ನಿಲ್ದಾಣದಿಂದ ಖಾಸಗಿ ಬಸ್ಗಳು ಖಾಲಿಯಾಗಿವೆ. ಕಳೆದು ದಿನಗಳಿಂದ ಸಾರಿಗೆ ನೌಕರರ ಮುಷ್ಕರದಿಂದ ಖಾಸಗಿ ಬಸ್ ಗಳಿಗೆ ಹಬ್ಬವಾಗಿತ್ತು. ಆದರೆ, ನಗರ ಬಸ್ ನಿಲ್ದಾಣಕ್ಕೆ ಶೇ.50 ರಷ್ಟು ಸಾರಿಗೆ ಬಸ್ ಆಗಮಿಸಿ, ತಮ್ಮ ಮಾರ್ಗಗಳಿಗೆ ತೆರಳಲು ಶುರುವಾಗುತ್ತಿದ್ದಂತೆ, ಬಸ್ ನಿಲ್ದಾಣದಿಂದ ಖಾಸಗಿ ಬಸ್ ಚಾಲಕರು ದೂರ ಸರಿದಿದ್ದಾರೆ. ಯುಗಾದಿ ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಹಾಗೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಆತಂಕದಿಂದ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ, ಸಾರಿಗೆ ನೌಕರರ ಮುಷ್ಕರ ನಿಲ್ಲುವುದಿಲ್ಲ ಎಂದು ಎಣಿಸಿರುವ ಪ್ರಯಾಣಿಕರು ನಗರ ಬಸ್ ನಿಲ್ದಾಣದ ಕಡೆ ಹೆಚ್ಚಾಗಿ ಆಗಮಿಸಿಲ್ಲ.