ಮೈಸೂರು: ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿನಲ್ಲಿ ಪ್ರವಾಹ ಪರಿಣಾಮದಿಂದ 200 ರಿಂದ 300 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ರು.
ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಮಾತನಾಡಿದ ಹೆಚ್.ಡಿ.ಕೋಟೆ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು, ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಹೆಚ್.ಡಿ.ಕೋಟೆ. ಇಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನರೇ ಹೆಚ್ಚಾಗಿದ್ದು, ಪ್ರವಾಹದಿಂದ ರಕ್ಷಣೆ ಒದಗಿಸಲು ಒಟ್ಟು 47 ಗ್ರಾಮಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಆದ್ರೆ, ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ದೂರಿದ್ರು.
ಸುಮಾರು 5-6 ಹಳೆಯ ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು,ಇವುಗಳ ನಿರ್ವಹಣೆಗೆ ಹಾಗೂ ಪುನರ್ ನಿರ್ಮಾಣಕ್ಕೆ 30 ಕೋಟಿ ರೂ ಬೇಕಿದೆ. ಹೆಚ್.ಡಿ.ಕೋಟೆ ಹಾಗೂ ಸರಗೂರು ಭಾಗದಲ್ಲಿ ಮಳೆಯಿಂದಾಗ ಅಪಾರ ಹಾನಿಯಾಗಿದ್ದು,ಇದಕ್ಕಾಗಿ 200 ರಿಂದ 300 ಕೋಟಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಬೇಕು. ಅಲ್ಲದೇ ಶೀಘ್ರವೇ ಸರ್ಕಾರ ಹಾಗೂ ಜಿಲ್ಲಾಡಳಿತ ಸಮಸ್ಯೆಗಳಿಗೆ ಸ್ಪಂದಿಸಬೇಕು, ಈ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.