ಮೈಸೂರು: ಹಾಲು ಕುಡಿದು ಶಾಲೆಯ 20 ಮಕ್ಕಳು ಅಸ್ವಸ್ಥರಾಗಿದ್ದರಿಂದ ಅವರೆನ್ನೆಲ್ಲ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕಿರಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ ಹಾಲು ಕುಡಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಶಿಕ್ಷಕರು ಕೂಡಲೇ ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಈಗ ಎಲ್ಲ ಮಕ್ಕಳು ಚೇತರಿಸಿಕೊಂಡಿದ್ದಾರೆ.
ಶಾಲೆ ಆರಂಭಕ್ಕೂ ಮುನ್ನ ಇಬ್ಬರು ಮಕ್ಕಳು ಹೊರಗಡೆ ಮಾರುತ್ತಿದ್ದ ಬೆಲ್ಲ ಹಾಗೂ ಹುಣಸೆಹಣ್ಣು ತಿಂದು ಹಾಲು ಕುಡಿದ ಕೂಡಲೇ ವಾಂತಿ ಮಾಡಿದ್ದಾರೆ. ಇದನ್ನು ನೋಡಿ ಮಿಕ್ಕ ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಹಾಲು ಪುಡಿಯಲ್ಲಿ ಯಾವುದೇ ಸಮಸ್ಯೆಯಿಲ್ಲವೆಂದು ಬಿಇಒ ನಾಗರಾಜ್ ತಿಳಿಸಿದ್ದಾರೆ.