ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಈವರೆಗೆ ದಾಖಲೆ ಇಲ್ಲದ 2.32 ಕೋಟಿ ನಗದು, 9.04 ಕೋಟಿ ಮೌಲ್ಯದ 2.83 ಲಕ್ಷ ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು. ಮಾದಕ ಮತ್ತು ನಶೆಯನ್ನುಂಟು ಮಾಡುವ 7.54 ಲಕ್ಷ ವೌಲ್ಯದ 22.187 ಕೆಜಿ ತೂಕದ ವಸ್ತು, 21.51 ಲಕ್ಷ ವೌಲ್ಯದ ಇತರೆ ಸಾಮಗ್ರಿ ಹಾಗೂ 60 ಸಾವಿರ ವೌಲ್ಯದ ಚುನಾವಣಾ ಪ್ರಚಾರ ಸಾಮಗ್ರಿಯನ್ನು ವಶಕ್ಕೆ ಪಡೆದಿದ್ದಾರೆ.
ಸಿ ವಿಜಿಲ್ ಮೂಲಕ ಒಟ್ಟು 120 ಪ್ರಕರಣ ದಾಖಲಾಗಿವೆ. ಕಳೆದ 2018ರಲ್ಲಿ ಒಟ್ಟು 2905 ಮತಗಟ್ಟೆ ಪೈಕಿ 1199 ಮತಗಟ್ಟೆಗಳಲ್ಲಿ ರಾಜ್ಯದ ಮತದಾನದ ಸರಾಸರಿಗಿಂತ ಕಡಿಮೆ ಮತದಾನ ಆಗಿದೆ. ಈ ಪೈಕಿ 303 ಗ್ರಾಮೀಣ ಮತಗಟ್ಟೆಗಳು ಮತ್ತು 896 ನಗರ ಪ್ರದೇಶದ ಮತಗಟ್ಟೆಗಳು ಇವೆ ಎಂದರು.
ಮತದಾನವನ್ನು ಶೇಖಡಾವಾರು ಹೆಚ್ಚಿಸುವ ಉದ್ದೇಶದಿಂದ ಜಾವಗಲ್ ಶ್ರೀನಾಥ್, ಅಂಗವಿಕಲ ರಾಷ್ಟ್ರೀಯ ಕ್ರೀಡಾಪಟು ಮಹೇಂದ್ರ ಅವರನ್ನು ಐಕಾನ್ ಆಗಿ ನೇಮಿಸಿಕೊಂಡಿದ್ದು, ಅವರು ಜಾಗೃತಿ ಮೂಡಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಯುವ ಮತದಾರರ ಮೂಲಕ ಕ್ಯಾಂಡಲ್ ಲೈಟ್ ಜಾಥಾ ನಡೆಸಲಾಗಿದೆ. ಈ ಜಾಥಾದಲ್ಲಿ ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಜಿಪಂ ಸಿಇಒ ಇದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಕಡಿಮೆ ಮತದಾನ ಆದ ಮತಗಟ್ಟೆಗಳಿಗೆ ಬಿಎಲ್‌ಒ ಮತ್ತು ತಂಡಗಳು ಭೇಟಿ ನೀಡಿ ಮತದಾನದ ಶೇಖಡಾವಾರು ಪ್ರಮಾಣ ಹೆಚ್ಚಿಸಲು ಮನೆಗಳಿಗೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸುತ್ತಾರೆ. ಜಿಲ್ಲೆಯಲ್ಲಿ ಒಟ್ಟು 41 ಶಾಲಾ ಚಿತ್ರಕಲಾ ಶಿಕ್ಷಕರನ್ನು ಗುರುತಿಸಿ ಅವರ ಮೂಲಕ ಮತದಾನ ಕೇಂದ್ರಗಳನ್ನು ಆಕರ್ಷಣೆಗೊಳಿಸಲಾಗುತ್ತಿದೆ. ತೃತೀಯ ಲಿಂಗಿಗಳನ್ನು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವಂತೆ ಮಾಡುವುದು ನಮ್ಮ ಉದ್ದೇಶ. ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು, ಮತದಾನದ ಪ್ರತಿಜ್ಞಾ ವಿಧಿ ಬೋಧಿಸಬೇಕು.
ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಂಚೆ ಮೂಲಕ ಮತದಾನ ಮಾಡಲು ಪ್ರೇರೇಪಿಸುವುದು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಜಾಗೃತಿ, ಪಿರಿಯಾಪಟ್ಟಣದಲ್ಲಿ ಕಸ ಸಂಗ್ರಹಿಸುವ ವಾಹನದ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ 97 ವಿಶೇಷ ಮತಗಟ್ಟೆಗಳನ್ನು ಆಯ್ಕೆ ಮಾಡಿದ್ದು, ಈ ಪೈಕಿ 55 ಸಖಿ ಬೂತ್‌ಗಳು, 11 ಪಿಡಬ್ಲ್ಯೂಡಿ ಬೂತ್, 11 ಯುವ ಮತದಾರರ ಬೂತ್, 1- ಥೀಮ್ ಬೇಸ್ ಬೂತ್, 10 ಎತ್ನಿಕ್ ಬೂತ್ ಎಂದು ಗುರುತಿಸಲಾಗಿದೆ.
ಥೀಮ್ ಬೇಸ್ ಬೂತ್‌ನಲ್ಲಿ ಮೈಸೂರು ಜಿಲ್ಲೆಯ ಪಾರಂಪರಿಕತೆ ಬಿಂಬಿಸುವ ಮತಗಟ್ಟೆ, ಸಾಂಸ್ಕೃತಿಕ ನಗರ ಮೈಸೂರನ್ನು ಪ್ರತಿಬಿಂಬಿಸುವ ಮತಗಟ್ಟೆಗಳು, ಅರಮನೆ, ಮೃಗಾಲಯ, ಲಲಿತಮಹಲ್ ಅರಮನೆ, ಜಗನ್ಮೋಹನ ಅರಮನೆ ಮುಂತಾದವನ್ನು ಪ್ರತಿಬಿಂಬಿಸುವ ಬೂತ್‌ಗಳು, ಆಯಾ ತಾಲೂಕಿನ ಸ್ಥಳೀಯ ಆಕರ್ಷಣೀಯ ಸ್ಥಳಗಳನ್ನು ಪ್ರತಿಬಿಂಬಿಸುವ ಬೂತ್ ಇದೆ. ಎತ್ನಿಕ್ ಬೂತ್‌ನಲ್ಲಿ ಮತದಾನದ ದಿನದಂದು ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಯು ಗಿರಿಜನ ಹಾಡಿ ಆದಿವಾಸಿಗಳ ಉಡುಗೆ ತೊಟ್ಟು ಮತದಾರರನ್ನು ಆಕರ್ಷಿಸುವುದಾಗಿ ಡಿಸಿ ರಾಜೇಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಇದ್ದರು.
ಇದನ್ನೂ ಓದಿ: ನಾನು ಕೂಡ ವೋಟ್ ಮಾಡುವೆ, ನೀವು ಕೂಡ ತಪ್ಪದೇ ವೋಟ್ ಮಾಡಿ: ಸೆಲೆಬ್ರಿಟಿಗಳ ಮನವಿ