ಮೈಸೂರು: ಗ್ರಾಮೀಣ ಭಾಗದಲ್ಲೇ ಹೆಚ್ಚು ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ನಡುವೆ ತಾಲೂಕಿನ 14 ಗ್ರಾಮಗಳಲ್ಲಿ ಕೋವಿಡ್ ಪ್ರಕರಣ ಶೂನ್ಯವಾಗಿದ್ದು, ಕೋವಿಡ್-19ಗೆ ಪ್ರವೇಶ ನೀಡದ ಹಳ್ಳಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೈಸೂರು ತಾಲೂಕು ವ್ಯಾಪ್ತಿಗೆ ಒಳಪಡುವ 37 ಗ್ರಾಮ ಪಂಚಾಯತ್ಗಳಲ್ಲಿ 11 ಗ್ರಾಮ ಪಂಚಾಯತ್ಗೆ ಸೇರುವ 14 ಗ್ರಾಮಗಳಲ್ಲಿ ಇದುವರೆಗೂ ಒಂದೂ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ. ಈ ಗ್ರಾಮಗಳು ಕೊರೊನಾ ಮುಕ್ತವಾಗಿದ್ದು, ಇದು ಇತರೆ ಹಳ್ಳಿಗಳಿಗೆ ಮಾದರಿಯಾಗಿವೆ.
ತಾಲೂಕಿನ ಮಾದಗಳ್ಳಿ, ರಾಯನಕೆರೆ, ಕಟ್ಟೆಹುಂಡಿ, ಕುಂಬ್ರಳ್ಳಿ, ಚಿಕ್ಕೇಗೌಡನಹುಂಡಿ, ಕೃಷ್ಣಪುರ, ರಾಮನಹಳ್ಳಿ, ಗುಡುಮಾದನಹಳ್ಳಿ, ಇನಮ್ ಉತ್ತನಹಳ್ಳಿ, ಲಕ್ಷ್ಮೀಪುರ, ಮಾಕನಹುಂಡಿ, ಹಂಚ್ಯಾಹುಂಡಿ, ಹೊಸಹುಂಡಿ, ಗುರುಕಾರಪುರ ಗ್ರಾಮಗಳು ಕೊರೊನಾ ಸೋಂಕಿಗೆ ಪ್ರವೇಶ ನೀಡದ ಗ್ರಾಮಗಳಾಗಿವೆ.
ಮಾರ್ಗಸೂಚಿಗೆ ಆದ್ಯತೆ ನೀಡಿದ ಗ್ರಾಮಸ್ಥರು: ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಜೊತೆಗೆ ಗ್ರಾಮಸ್ಥರೂ ಕೂಡ ಸ್ವಂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಫಲವಾಗಿ ಈ ಗ್ರಾಮಗಳು ಕೋವಿಡ್ ಸೋಂಕಿನಿಂದ ದೂರ ಉಳಿದವು.
ಇಲ್ಲಿನ ಜನರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗದೆ ಇರುವುದು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗುವುದು, ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಅನೇಕ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡಿದ ಪರಿಣಾಮದಿಂದಾಗಿ ಕೋವಿಡ್ ಈ ಗ್ರಾಮಗಳಿಗೆ ಕಾಲಿಡಲಿಲ್ಲ.
ಗ್ರಾಮ ಪಂಚಾಯತ್ಗಳಿಂದ ಜಾಗೃತಿ: ಗ್ರಾಮ ಪಂಚಾಯತ್ ವತಿಯಿಂದ ಕೋವಿಡ್ ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಲು ಡಂಗೂರ ಸಾರುವ ಮೂಲಕ ಗ್ರಾಮಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸ್ವತಃ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿ ಮನೆ ಮನೆ ಬಾಗಿಲಿಗೆ ಹೋಗಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಿ ದೈಹಿಕ ಅಂತರ ಕಾಪಾಡುವುದು ಮತ್ತು ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡುತ್ತಿದ್ದಾರೆ. ಒಂದೆರಡು ಹಳ್ಳಿಗಳಲ್ಲಿ ಮಾತ್ರ ಲಕ್ಷಣ ಕಾಣಿಸಿಕೊಂಡ ಎರಡು ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.
ಆಶಾ, ಅಂಗನವಾಡಿ ಕಾರ್ಯಕರ್ತೆಯರ ಅವಿರತ ಶ್ರಮ: ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಚುರುಕಾಗಿ ಕೆಲಸ ಮಾಡುತಿದ್ದಾರೆ. ಪ್ರತಿನಿತ್ಯ ಗ್ರಾಮದ ಮನೆ ಮನೆಗೆ ತೆರಳಿ ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ರಿನಿಂಗ್‌ನಿಂದ ಆರೋಗ್ಯ ಸ್ಥಿರತೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಓದಿ: 'ರೈತರಿಗೆ ಈ ಬೆಳೆ ಹೋದ್ರೆ, ಮತ್ತೆ ಬೆಳೆ ಬರುತ್ತೆ ಬಿಡಿ': ನಗರಾಭಿವೃದ್ಧಿ ಸಚಿವರ ಬೇಜವಾಬ್ದಾರಿ ಉತ್ತರ