ಮಂಡ್ಯ: ಜಿಲ್ಲೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದೆ. ನಾಗಮಂಗಲದ ಬೆಳ್ಳೂರು ಪಟ್ಟಣದ ಸಂತೆ ಮೈದಾನದಲ್ಲಿ ಸುನಿಲ್ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸಕ್ಕರೆನಾಡಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದ ಮೂರನೇ ಕೊಲೆ ಪ್ರಕರಣ ಇದಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ದೇವಸ್ಥಾನದಲ್ಲಿ ರೌಡಿಶೀಟರ್ವೊಬ್ಬನನ್ನು ಕೊಲೆ ಮಾಡಲಾಗಿತ್ತು. ಇದೀಗ ನಾಲ್ಕು ದಿನಗಳಲ್ಲೇ ಮತ್ತೊಂದು ಪ್ರಕರಣ ನಡೆದಿದೆ. ನಾಗಮಂಗಲದ ಬೆಳ್ಳೂರು ಪಟ್ಟಣದ ಅಂಬೇಡ್ಕರ್ ಕಾಲೋನಿ ನಿವಾಸಿ ಸುನಿಲ್ ಎಂಬಾತ ಭಾನುವಾರ ರಾತ್ರಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದಾಗ ದಾಳಿ ಮಾಡಲಾಗಿದೆ. ರಸ್ತೆ ಮಧ್ಯ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆಗೈದು ಪರಾರಿಯಾಗಿದೆ.
ತೀವ್ರ ಗಾಯಗೊಂಡಿದ್ದ ಸುನಿಲ್ನನ್ನು ಸ್ಥಳೀಯ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಾಗಮಂಗಲದ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ: 20ಕ್ಕೂ ಹೆಚ್ಚು ಬೈಕ್, ಹಾಸಿಗೆಗಳು ಸುಟ್ಟು ಕರಕಲು