ಮಂಡ್ಯ: ಜ್ವರಕ್ಕೆ ಇಂಜೆಕ್ಷನ್ ಪಡೆದಿದ್ದ ಬಾಲಕ ಮೃತಪಟ್ಟಿದ್ದು, ಖಾಸಗಿ ಕ್ಲಿನಿಕ್ ವೈದ್ಯರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಆರೋಪಿಸಿ ತಾಲೂಕಿನ ಚಂದಗಾಲು ಗ್ರಾಮದ ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲೂಕಿನ ಚಂದಗಾಲು ಗ್ರಾಮದ ದಲಿತ ಮುಖಂಡ ಸಿ.ಡಿ.ವಿಜಯಕುಮಾರ್ ಅವರ ಮಗ ವಿಶಾಂತ್(17) ಮೃತ ಯುವಕ. ಈತನಿಗೆ ಮೂರು ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ವಿ.ಸಿ.ಫಾರಂ ಗೇಟ್ ಬಳಿ ಇರುವ ಡಾ.ಕೆ.ಟಿ.ಸಂತೋಷ್ ಎಂಬುವರು ನಡೆಸುತ್ತಿದ್ದ ಕ್ಲಿನಿಕ್‌ಗೆ ಹೋಗಿ ಇಂಜೆಕ್ಷನ್ ಪಡೆದಿದ್ದಾನೆ. ಆದರೆ, ಜ್ವರ ಹೆಚ್ಚಾದ ಹಿನ್ನೆಲೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.
ಕ್ಲಿನಿಕ್‌ನಲ್ಲಿ ಪಡೆದ ಇಂಜೆಕ್ಷನ್‌ನಿಂದಲೇ ಈ ರೀತಿಯಾಗಿದೆ ಎಂದು ಪಾಲಕರು ಹಾಗೂ ಸಂಬಂಧಿಕರು ಬುಧವಾರ ರಾತ್ರಿ ಮೃತದೇಹದೊಂದಿಗೆ ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ, ಶಿವಳ್ಳಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ಮೃತದೇಹವನ್ನು ಮಿಮ್ಸ್‌ಗೆ ರವಾನಿಸಿದರು. ಅಲ್ಲದೇ ಪಾಲಕರಿಂದ ದೂರು ದಾಖಲಿಸಿಕೊಂಡಿದ್ದರು.
ಇನ್ನು ಇಂದು ಸಹ ಮಿಮ್ಸ್ ಶವಾಗಾರದ ಎದುರು ಪ್ರತಿಭಟನೆ ನಡೆಸಿದ ಕುಟುಂಬಸ್ಥರು, ವೈದ್ಯನನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮೃತನ ಕುಟುಂಬಸ್ಥರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಆಗಮಿಸಿ ವೈದ್ಯನ ವಿರುದ್ಧ ಕ್ರಮದ ಭರವಸೆ ನೀಡಿದರು.