ಮಂಡ್ಯ : ತಾಲೂಕಿನ ಹೊಸ ಬೂದನೂರು ಹಾಗೂ ಹಳೆ ಬೂದನೂರು ನಡುವೆ ಇರುವ ಕಬ್ಬಿನ ಗದ್ದೆಯಲ್ಲಿ ಐದು ಆನೆಗಳು ಕಂಡುಬಂದಿವೆ. ಚನ್ನಪಟ್ಟಣದ ಅರಣ್ಯ ಪ್ರದೇಶಗಳಿಂದ ಆಗಮಿಸಿರುವ ಆನೆಗಳು ರಾತ್ರಿ ತಾಲೂಕಿನ ಅಂಬರಹಳ್ಳಿ ಸಮೀಪದ ಜಮೀನುಗಳಲ್ಲಿ ಕಾಣಿಸಿಕೊಂಡಿದ್ದವು. ಅವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನಿಸಿದರಾದರೂ ಆನೆಗಳ ಹಿಂಡು ಕಾಡಿನತ್ತ ಹೋಗದೆ ಹಳೆ ಬೂದನೂರು ಗ್ರಾಮದಲ್ಲಿನ ಕಬ್ಬಿನ ಗದ್ದೆ ಸೇರಿಕೊಂಡಿವೆ.
ಮಧ್ಯರಾತ್ರಿವರೆಗೂ ಮಂಡ್ಯ ಅರಣ್ಯ ಇಲಾಖೆಯ ಎಸಿಎಫ್ ಮಹದೇವಸ್ವಾಮಿ ಮತ್ತು ತಂಡ ಆನೆಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದರಾದರೂ ಸಫಲರಾಗಲಿಲ್ಲ. ಇದರಿಂದಾಗಿ ಭಾನುವಾರ ಕಾರ್ಯಾಚರಣೆ ನಡೆಸಲು ನಿರ್ಧರಿಸಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಇಂದು ಬೆಳಗ್ಗೆ ಹೊಸ ಬೂದನೂರು ಗ್ರಾಮದ ಸಮೀಪವಿರುವ ಲೆಮನ್ ಗ್ರಾಸ್ ಹೋಟೆಲ್ ಹಿಂಭಾಗದ ಜಮೀನುಗಳಲ್ಲಿ ಕಾಣಿಸಿಕೊಂಡ ಆನೆಗಳನ್ನು ನೋಡಿ ಸಾರ್ವಜನಿಕರು ಭಯಭೀತರಾಗಿ ತಕ್ಷಣ ಇಲಾಖೆಗೆ ವಿಷಯ ಮುಟ್ಟಿಸಿದರು.
ಎಸಿಎಫ್ ಮಹಾದೇವಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಆನೆಗಳು ಕಬ್ಬಿನ ಗದ್ದೆ ಸೇರಿಕೊಂಡ ಕಾರಣ ಅವುಗಳನ್ನು ಕಾಡಿಗಟ್ಟಲು ಸಾಧ್ಯವಾಗಲಿಲ್ಲ. ಇಂದು ಸಂಜೆ 6 ಗಂಟೆಗೆ ಕಾರ್ಯಾಚರಣೆ ನಡೆಸಿ ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶ ಅಥವಾ ಚನ್ನಪಟ್ಟಣದ ಅರಣ್ಯ ಪ್ರದೇಶಕ್ಕಟ್ಟಲು ನಿರ್ಧರಿಸಲಾಯಿತು. ವಿಷಯ ತಿಳಿದು ಮಂಡ್ಯ ತಹಶೀಲ್ದಾರ್ ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸಿಎಫ್ ಮಹಾದೇವಸ್ವಾಮಿ ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಜನರು ಆನೆಗಳತ್ತ ಸುಳಿಯದಂತೆ ಎಚ್ಚರಿಕೆ ವಹಿಸಿದ್ದಾರೆ.
ಎಸಿಎಫ್ ಮಹಾದೇವಸ್ವಾಮಿ ಮಾತನಾಡಿ, "ಚನ್ನಪಟ್ಟಣದ ಅರಣ್ಯ ಪ್ರದೇಶಗಳಿಂದ ಆಗಮಿಸಿರುವ ಈ ಆನೆಗಳ ಹಿಂಡು ರಾತ್ರಿ ತಾಲೂಕಿನ ಅಂಬರಹಳ್ಳಿ ಸಮೀಪದ ಜಮೀನುಗಳಲ್ಲಿ ಕಾಣಿಸಿಕೊಂಡಿದ್ದವು. ರಾತ್ರಿಯಾದ್ದರಿಂದ ಅವುಗಳನ್ನು ಕಾಡಿಗಟ್ಟಲು ಸಾಧ್ಯವಾಗಲಿಲ್ಲ. ಆದರೆ ಬೆಳಗ್ಗೆ ಲೆಮನ್ ಗ್ರಾಸ್ ಹೋಟೆಲ್ ಹಿಂಭಾಗದ ಜಮೀನುಗಳಲ್ಲಿ ಬಂದು ನಿಂತಿವೆ. ಹಗಲು ಹೊತ್ತಲ್ಲಿ ಆನೆಗಳನ್ನು ಓಡಿಸಲು ಆಗುವುದಿಲ್ಲ. ಸಂಜೆಯಾದ ಮೇಲೆ ಅವುಗಳೇ ಹೋಗುತ್ತವೆ. ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆ, ರೆವಿನ್ಯೂ ಇಲಾಖೆ ಅಧಿಕಾರಿಗಳಿಗೆಲ್ಲ ಹೇಳಿದ್ದೇವೆ. ಸುತ್ತಮುತ್ತಲಿನ ಜನಗಳಿಗೆ ಜಾಗೃತರಾಗಿರುವಂತೆ ಸೂಚಿಸಿದ್ದೇವೆ. ಆದಷ್ಟು ಎಚ್ಚರಿಕೆ ಇರಲಿ ಎಂದು ಹೇಳಿದ್ದೇವೆ. ಪೊಲೀಸರು ಕೂಡಾ ನಮ್ಮ ಜೊತೆ ಇದ್ದಾರೆ. ಎಲಿಫೆಂಟ್ ಟಾಸ್ಕ್ ಫೋರ್ಸ್ ಕೂಡಾ ನಮ್ಮ ಜೊತೆ ಬಂದಿದೆ. ಹೀಗಾಗಿ ಸಾಯಂಕಾಲದ ನಂತರ ಅವುಗಳನ್ನು ವಾಪಸ್ ಕಳುಹಿಸುವ ಪ್ರಯತ್ನ ಮಾಡುತ್ತೇವೆ" ಎಂದರು.
ಅರಣ್ಯ ಸಿಬ್ಬಂದಿ ಬೆನ್ನಟ್ಟಿದ ಕಾಡಾನೆ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮೇಗೂರಿನ ಅತ್ತಿಗುಣಿ ಹರದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭದಲ್ಲಿ ಆನೆಯೊಂದು ಅರಣ್ಯ ಸಿಬ್ಬಂದಿಯನ್ನು ಅಟ್ಟಿಸಿಕೊಂಡು (ಆಗಸ್ಟ್ -8-2023) ಬಂದಿತ್ತು. ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ಅರಣ್ಯ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಬಂದ ಕಾಡಾನೆ