ಮಂಡ್ಯ: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೊನಾ ನಿಯಮಗಳು ಅತೀ ಹೆಚ್ಚು ಉಲ್ಲಂಘನೆ ಆಗಿದ್ದರೆ, ಅದು ಬಿಜೆಪಿ ಅವರಿಂದ ಮಾತ್ರ. ಒಬ್ಬ ಸಚಿವ ಮಾಸ್ಕ್ ಹಾಕದೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾನೆ. ಹೀಗಿರುವಾಗ ಸಾಮಾನ್ಯ ಜನ ಕೊರೊನಾ ನಿಯಮವನ್ನ ಹೇಗೆ ಪಾಲಿಸುತ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಯಾವಾಗಲೂ ಡಬಲ್ ಸ್ಟ್ಯಾಂಡರ್ಡ್:
ಮಂಡ್ಯ ತಾಲೂಕಿನ ಗೌಡಹಳ್ಳಿ ಗೇಟ್ ಬಳಿ ಆಗಮಿಸಿದ್ದ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಮಗಳನ್ನು ಅತೀ ಹೆಚ್ಚು ಉಲ್ಲಂಘನೆ ಮಾಡುತ್ತಿರುವುದು ಬಿಜೆಪಿಯವರು. ಬಿಜೆಪಿಯವರು ಯಾವಾಗಲೂ ಡಬಲ್ ಸ್ಟ್ಯಾಂಡರ್ಡ್ ನವರೇ..! ಅವರಿಗೆ ಯಾವ ಸಿಂಗಲ್ ಸ್ಟ್ಯಾಂಡರ್ಡ್ ಇದೆ? ಅವರು ಯಾವಾಗಲೂ ಹೇಳುವುದು ಒಂದು, ಮಾಡುವುದು ಇನ್ನೊಂದು. ಇವತ್ತು ಏನಾದರೂ ಕೊರೊನಾ ನಿಯಮ ಉಲ್ಲಂಘನೆ ಆಗಿದ್ರೆ, ಅದು ಬಿಜೆಪಿ ಅವರಿಂದಲೇ ಜಾಸ್ತಿ ಆಗಿದೆ ಎಂದು ವಾಗ್ದಾಳಿ ನಡೆಸಿದ್ರು.
ಸಚಿವ ಕತ್ತಿ ವಿರುದ್ಧ ಕಿಡಿ..
ಸಚಿವ ಉಮೇಶ್ ಕತ್ತಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿರುವ ಸಿದ್ದರಾಮಯ್ಯ, ಕತ್ತಿ ಇದ್ದಾನಲ್ಲ ಮಾಸ್ಕ್ ಹಾಕದೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾನೆ. ಇವರೆಲ್ಲ ಸಚಿವರಾಗೋದಕ್ಕೆ ಲಾಯಕ್ಕಾ.? ಇವರ ಮೇಲೆ ಸರ್ಕಾರ ಯಾಕೆ ಕೇಸ್ ಹಾಕಿಲ್ಲ? ಇವರಿಗೆ ಸರ್ಕಾರ ನಡೆಸಲಿಕ್ಕೆ ಯೋಗ್ಯತೆ ಇದ್ಯಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸಚಿವವನೇ ಮಾಸ್ಕ್ ಹಾಕಲಿಲ್ಲ ಅಂದ್ರೆ, ಬೇರೆಯವರು ಯಾಕೆ ಮಾಸ್ಕ್ ಹಾಕಬೇಕು. ಬೇರೆಯವರಿಗೆ ಫೈನ್ ಹಾಕ್ತಾರೆ, ಕೇಸ್ ಹಾಕ್ತಾರೆ. ಹಾಗಾದ್ರೆ ಸಚಿವರ ವಿರುದ್ಧ ಕೇಸ್ ಹಾಕಲಿ ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.
ವೀಕೆಂಡ್ ಕರ್ಫ್ಯೂನಿಂದ ಕೊರೊನಾ ತಡೆಯುವುದು ಅಸಾಧ್ಯ:
ವೀಕೆಂಡ್ ಕರ್ಫ್ಯೂ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ವೀಕೆಂಡ್ ಕರ್ಫ್ಯೂನಿಂದ ಕೊರೊನಾ ತಡೆಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನ್ ಕೊಡಲಿ, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಅವುಗಳು ಸರಿಯಾಗಿ ಪಾಲನೆಯಾಗುವಂತೆ ಕ್ರಮವಹಿಸಬೇಕು. ಅದನ್ನು ಬಿಟ್ಟು ಹೀಗೆ ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್ ಎಂದು ಪದೇ ಪದೇ ಹೇಳುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಲ್ಯಾಬ್ಗಳಲ್ಲಿ ತಪ್ಪು ರಿಪೋರ್ಟ್ ಕೊಟ್ಟರೆ ಲೈಸೆನ್ಸ್ ರದ್ದು, ಕಠಿಣ ಕ್ರಮ: ಸಚಿವ ಸುಧಾಕರ್
ಮೊನ್ನೆಯಷ್ಟೇ ಕಾಳಿ ಮಠದ ರಿಷಿಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಅಲ್ಲಿ ಮಸೀದಿ ಇದ್ರೆ ಮಸೀದಿ, ದೇವಸ್ಥಾನ ಇದ್ರೆ ದೇವಸ್ಥಾನ. ದೇವಸ್ಥಾನ ಕೆಡುವಿ ಮಸೀದಿ ಕಟ್ಟೋದಾಗಲಿ, ಮಸೀದಿ ಕೆಡವಿ ದೇವಸ್ಥಾನ ಕಟ್ಟೋದು ಮಾಡಬಾರದು. ಈಗ ಹೇಗಿದೆಯೋ ಹಾಗೆ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಲಿ ಎಂದು ಹೇಳಿದರು.